ಕಾಂಗ್ರೆಸ್-ಪಿಎಫ್ ಐ ಒಂದೇ ಎಂದು ನಾನು ಎಂದಿಗೂ ಹೇಳಿಲ್ಲ: ಅಮಿತ್ ಶಾ

Update: 2023-02-14 08:47 GMT

ಹೊಸದಿಲ್ಲಿ: ಈಗ ನಿಷೇಧಿತವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಕಾಂಗ್ರೆಸ್ ಪಕ್ಷ ಒಂದೇ ಎಂದು ತಾನು  ಎಂದಿಗೂ ಹೇಳಿಲ್ಲ ಎಂದು ಗೃಹ ಸಚಿವ ಅಮಿತ್ ಶಾ (Amit Shah)ಮಂಗಳವಾರ ಹೇಳಿದ್ದಾರೆ.

ANIಗೆ ನೀಡಿದ ಸಂದರ್ಶನದಲ್ಲಿ ಶನಿವಾರ ಕರ್ನಾಟಕದಲ್ಲಿ ನೀಡಿದ್ದ ಹೇಳಿಕೆಯ ಬಗ್ಗೆ ಶಾ ಅವರನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ಪಿಎಫ್‌ಐ ಹಾಗೂ ಕಾಂಗ್ರೆಸ್ ಒಂದೇ ಎಂದು ನಾನು ಹೇಳಿಲ್ಲ. PFI ಮೇಲೆ ಹಲವಾರು ಪ್ರಕರಣಗಳಿವೆ ಹಾಗೂ PFI ಸದಸ್ಯರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಕಾಂಗ್ರೆಸ್ ಪ್ರಯತ್ನಿಸಿತು. ನಾವು ಅದನ್ನು ತಡೆಯಲು ಪ್ರಯತ್ನಿಸಿದ್ದೇವೆ. ಅಷ್ಟೇ ಎಂದರು.

"ನಾವು PFI ಅನ್ನು ಯಶಸ್ವಿಯಾಗಿ ನಿಷೇಧಿಸಿದ್ದೇವೆ. ನನ್ನ ಪ್ರಕಾರ  PFI ಮತಾಂತರ ಹಾಗೂ  ಮೂಲಭೂತವಾದವನ್ನು ಹರಡುತ್ತಿದೆ.  ಪಿಎಫ್‌ಐ ನಡೆಸುತ್ತಿರುವ ಚಟುವಟಿಕೆಗಳು ದೇಶದ ಏಕತೆಗೆ ಒಳ್ಳೆಯದಲ್ಲ ಎಂಬ ಹಲವು ದಾಖಲೆಗಳು ನಮ್ಮ ಬಳಿ ಇವೆ'' ಎಂದು ಶಾ ಸಂದರ್ಶನದಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಶನಿವಾರ ನಡೆದ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ 1,700 ಪಿಎಫ್‌ಐ ಸದಸ್ಯರನ್ನು ಬಿಡುಗಡೆ ಮಾಡಲಾಗಿತ್ತು ಎಂದು ಹೇಳಿದ್ದರು.

Similar News