ವಾರಾಣಸಿಯಲ್ಲಿ ರಾಹುಲ್ ಗಾಂಧಿಯ ವಿಮಾನ ಇಳಿಸಲು ಅನುಮತಿ ನಿರಾಕರಣೆ: ಕಾಂಗ್ರೆಸ್ ಕಿಡಿ
ವಾರಣಾಸಿ: ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾಹುಲ್ ಗಾಂಧಿ(Rahul Gandhi) ಅವರ ವಿಮಾನವನ್ನು ಇಳಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಒತ್ತಡಕ್ಕೆ ಮಣಿದು ಅನುಮತಿ ನೀಡಲಿಲ್ಲ, ರಾಷ್ರಪತಿ ದ್ರೌಪದಿ ಮುರ್ಮು ಅವರ ಭೇಟಿಯನ್ನು ಅವರು ನೆಪ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಜಯ್ ರೈ ಹೇಳಿದ್ದಾರೆ.
ವಾರಾಣಸಿ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ರಾಹುಲ್ ಗಾಂಧಿ ಅವರ ವಿಮಾನ ಇಳಿಯಬೇಕಿತ್ತು, ಆದರೆ ಉದ್ದೇಶಪೂರ್ವಕವಾಗಿ ಅನುಮತಿ ನೀಡಿಲ್ಲ ಎಂದು ಅವರು ಹೇಳಿದರು.
"ರಾಹುಲ್ ಗಾಂಧಿ ಇಲ್ಲಿಗೆ ಆಗಮಿಸಿ ನಂತರ ಪ್ರಯಾಗ್‌ರಾಜ್‌ಗೆ ಹೋಗಬೇಕಿತ್ತು, ಆದರೆ ಸರಕಾರದ ಒತ್ತಡದಿಂದಾಗಿ ವಿಮಾನ ನಿಲ್ದಾಣ ಪ್ರಾಧಿಕಾರವು ರಾಹುಲ್ ಅವರ ವಿಮಾನವನ್ನು ಇಳಿಸಲು ಅವಕಾಶ ನೀಡಲಿಲ್ಲ. ಭಾರೀ ವಿಮಾನ ಸಂಚಾರ ಹಾಗೂ ಸಂಚಾರ ದಟ್ಟಣೆ ಇದೆ ಎಂದು ಅವರು ಹೇಳಿದ್ದರು ಹಾಗೂ ಅನುಮತಿ ನೀಡಲಿಲ್ಲ" ಎಂದು ರೈ ಆರೋಪಿಸಿದ್ದಾರೆ.
ಬಿಜೆಪಿ ಸರಕಾರವು ರಾಹುಲ್ ಗಾಂಧಿಯ ಬಗ್ಗೆ ಹೆದರಿದೆ ಆದ್ದರಿಂದ ಅವರು ವಾರಣಾಸಿಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲು ಬಿಡಲಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿದ್ದರಿಂದ ದೇಶದ ಪ್ರಧಾನಿ ಆತಂಕದಲ್ಲಿದ್ದರು. , ಈಗ ಅವರು ರಾಹುಲ್‌ಗೆ ತೊಂದರೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.