ಕೇಂದ್ರ ಸರಕಾರ 10 ಲಕ್ಷ ರೂ. ಆರೋಗ್ಯ ವಿಮೆ ನೀಡಿದರೆ ನಾವು ಹಸುಗಳನ್ನು ಅಪ್ಪಿಕೊಳ್ಳುತ್ತೇವೆ: ಮಮತಾ ವ್ಯಂಗ್ಯ

ಅಪ್ಪಿಕೊಳ್ಳುವ ವೇಳೆ ದನ ದಾಳಿಗೈದರೆ ಏನು ಮಾಡುವುದು?

Update: 2023-02-14 08:55 GMT

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ “ಕೌ ಹಗ್ ಡೇ” ಆಚರಿಸುವ ಸಂದರ್ಭದಲ್ಲಿ ಹಸು ತನ್ನ ಮೇಲೆ ದಾಳಿ ಮಾಡಿದರೆ ಕೇಂದ್ರವು ಆರೋಗ್ಯ ವಿಮೆಯನ್ನು ನೀಡುತ್ತದೆಯೇ?, ಕೇಂದ್ರ ಸರಕಾರ 10 ಲಕ್ಷ ರೂ. ಆರೋಗ್ಯ ವಿಮೆ ನೀಡಿದರೆ ನಾವು ಹಸುಗಳನ್ನು ಅಪ್ಪಿಕೊಳ್ಳುತ್ತೇವೆ  ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾಗಿ ಪಿಟಿಐ ವರದಿ ಮಾಡಿದೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಫೆಬ್ರವರಿ 6 ರಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಪ್ರೇಮಿಗಳ ದಿನವನ್ನು "ಹಸು ಅಪ್ಪುಗೆಯ ದಿನ" ಎಂದು ಗುರುತಿಸುವಂತೆ ಮಾಡಿದ ಮನವಿಯನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡಿದ ನಿರ್ದೇಶನದ ಮೇರೆಗೆ ಫೆಬ್ರವರಿ 10 ರಂದು ನೋಟಿಸ್ ಹಿಂಪಡೆಯಲಾಗಿದೆ.

"ತಾಯಿ ಹಸುವಿನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಜೀವನವನ್ನು ಸಂತೋಷದಿಂದ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಲು" ಫೆಬ್ರವರಿ 14 ಅನ್ನು ಕೌ ಹಗ್ ಡೇ ಎಂದು ಆಚರಿಸಲು ಮಂಡಳಿಯು ಗೋಪ್ರೇಮಿಗಳನ್ನು ಒತ್ತಾಯಿಸಿದೆ. ಹಸುಗಳನ್ನು ತಬ್ಬಿಕೊಳ್ಳುವುದು "ಭಾವನಾತ್ಮಕ ಸಿರಿವಂತಿಕೆಯನ್ನು ತರುತ್ತದೆ" ಮತ್ತು "ನಮ್ಮ ವೈಯಕ್ತಿಕ ಸಂತೋಷವನ್ನು ಹೆಚ್ಚಿಸುತ್ತದೆ" ಎಂದು ಅದು ಹೇಳಿಕೊಂಡಿದೆ.

ಸೋಮವಾರ, ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಬ್ಯಾನರ್ಜಿ ಕೇಂದ್ರದ ವಿರುದ್ಧ ಈ ಮೇಲಿನ ಹೇಳಿಕೆಯೊಂದಿಗೆ ವ್ಯಂಗ್ಯವಾಡಿದರು.

"ನಾನು ಹಸುವಿನ ಮೇಲೆ ದೈಹಿಕವಾಗಿ ಪ್ರೀತಿಯನ್ನು ತೋರಿಸಲು ಹೋಗುತ್ತೇನೆ, ಒಳ್ಳೆಯದು, ಆದರೆ ಅದು ತನ್ನ ಕೊಂಬುಗಳಿಂದ ನನ್ನನ್ನು ಗಾಯಗೊಳಿಸಿದರೆ ಏನು ಮಾಡುವುದು?. ಅವರು [ಕೇಂದ್ರ] ಈ ವೇಳೆ ನನಗೆ ಆರೋಗ್ಯ ವಿಮೆಯನ್ನು ಖಚಿತಪಡಿಸುತ್ತಾರೆಯೇ? ಅದನ್ನು ಅವರು ಮೊದಲು ಮಾಡಬೇಕು. ಇದಕ್ಕಾಗಿ ಅವರು ರೂ. 10 ಲಕ್ಷ ವಿಮೆಯನ್ನು ನೀಡಬೇಕು, ನಂತರ ನಾವು ಹಸುಗಳನ್ನು ಅಪ್ಪಿಕೊಳ್ಳುತ್ತೇವೆ" ಎಂದು ವ್ಯಂಗ್ಯವಾಡಿದ್ದಾರೆ.

"ನಾನು ಹಸುಗಳನ್ನು ಪ್ರೀತಿಸುತ್ತೇನೆ, ಪೂಜಿಸುತ್ತೇನೆ ಆದರೆ ಅವುಗಳನ್ನು ಅಪ್ಪಿಕೊಳ್ಳುವುದು ನನ್ನ ಕೆಲಸವಲ್ಲ" ಎಂದು ಅವರು ಹೇಳಿದರು

"ಅವರು (ಬಿಜೆಪಿ) ಮೆದುಳಿನ ಜಾಗದಲ್ಲಿ ಏನು ಹೊಂದಿದ್ದಾರೆ, ನನಗೆ ಗೊತ್ತಿಲ್ಲ ಎಂದೂ ಈ ಸಂದರ್ಭದಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

Similar News