ಸರಕಾರವನ್ನು RSS ನಿಯಂತ್ರಿಸುತ್ತಿರುವುರಿಂದ ನಾವು ಅವರೊಂದಿಗೆ ಚರ್ಚೆ ನಡೆಸಿದ್ದೆವು:ಜಮಾಅತೆ ಇಸ್ಲಾಮಿ ಪ್ರ.ಕಾರ್ಯದರ್ಶಿ

Update: 2023-02-14 09:32 GMT

ಹೊಸದಿಲ್ಲಿ: ಮುಸ್ಲಿಂ ಸಂಘಟನೆ ಜಮಾಅತೆ ಇಸ್ಲಾಮಿ ಹಿಂದ್‌ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರ ನಡುವೆ ಜನವರಿ 14 ರಂದು ದಿಲ್ಲಿಯಲ್ಲಿ ಮಾತುಕತೆ ನಡೆದಿದ್ದು, ಈ ಕುರಿತು ಜಮಾಅತೆ ಇಸ್ಲಾಮಿ ಹಿಂದ್‌ ನ ಪ್ರಧಾನ ಕಾರ್ಯದರ್ಶಿ ಟಿ. ಆರಿಫ್‌ ಅಲಿ newindianexpress.com ಜೊತೆ ಮಾತನಾಡಿದ್ದಾರೆ. ಈ ವೇಳೆ, ಆರೆಸ್ಸೆಸ್‌ ಸರಕಾರ ನಿಯಂತ್ರಿಸುತ್ತಿರುವುರಿಂದ ನಾವು ಅವರೊಂದಿಗೆ ಚರ್ಚೆ ನಡೆಸಿದೆವು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. 

"ಮಾಜಿ ಚುನಾವಣಾ ಆಯುಕ್ತ ಎಸ್‌.ವೈ ಖುರೇಷಿ, ದಿಲ್ಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಶಾಹಿಸ್ ಸಿದ್ದೀಕಿ ಮತ್ತು ಸಯೀದ್ ಶೆರ್ವಾನಿ ಅವರು ಆಗಸ್ಟ್ 2022 ರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರನ್ನು ಭೇಟಿಯಾದರು. ನಂತರ ಆರೆಸ್ಸೆಸ್ ಹೆಚ್ಚಿನ ಮಾತುಕತೆಗಾಗಿ ನಾಲ್ಕು ಸದಸ್ಯರ ತಂಡವನ್ನು ನೇಮಿಸಿತು. 

ಈ ವೇಳೆ ಖುರೇಷಿ ನಮ್ಮನ್ನು ಸಂಪರ್ಕಿಸಿ ಸಹಕರಿಸುವಂತೆ ಕೇಳಿಕೊಂಡರು. ಇತರ ಮುಸ್ಲಿಂ ಸಂಘಟನೆಗಳೊಂದಿಗೂ ಮಾತನಾಡಿದ್ದರು. ಆದರೆ ಮಾತುಕತೆ ಸಮಾನ ಮಟ್ಟದಲ್ಲಿರಬೇಕು ಮತ್ತು ಪಾರದರ್ಶಕವಾಗಿರಬೇಕು ಎಂದು ನಾವು ಸ್ಪಷ್ಟಪಡಿಸಿದ್ದೆವು. ಇದಲ್ಲದೆ, ಎರಡು ವಿಭಾಗಗಳೂ ಇನ್ನೊಬ್ಬರು ಏನು ಹೇಳುತ್ತಾರೆಂದು ಕೇಳಲು ಒಪ್ಪಿಕೊಳ್ಳಬೇಕು. ಸಭೆಯ ಕೊನೆಯಲ್ಲಿ ತಾರ್ಕಿಕ ತೀರ್ಮಾನವಾಗಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಈ ಎಲ್ಲದಕ್ಕೂ ಖುರೇಷಿ ಭರವಸೆ ನೀಡಿದ್ದರು" ಎಂದು ಆರಿಫ್‌ ಹೇಳಿದರು.

"ಮುಸ್ಲಿಂ ಸಂಘಟನೆಗಳೊಂದಿಗಿನ ಈ ಸಂವಾದದ ಮೂಲಕ ಆರೆಸ್ಸೆಸ್ ಕೇಂದ್ರ ಸರ್ಕಾರವನ್ನು ನಿಯಂತ್ರಿಸುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ. ಅದೇ ಸತ್ಯ ಕೂಡಾ. ಹೀಗಿದ್ದರೂ, ಚರ್ಚೆಯು ವೈಯಕ್ತಿಕ ಮತ್ತು ಸಂಘಟನಾತ್ಮಕ ಹಿತಾಸಕ್ತಿಗಳನ್ನು ಆಧರಿಸಿರಬಾರದು ಎಂಬ ನಮ್ಮ ನಿಲುವಿನಲ್ಲಿ ನಾವು ಸ್ಪಷ್ಟವಾಗಿದ್ದೆವು. ಚರ್ಚೆಯು ಭಾರತೀಯ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ನಾವು ಹಿಂದೆ ಸರಿಯಲು ನಿರ್ಧರಿಸಿದ್ದೇವೆ" ಎಂದು ಅವರು ಹೇಳಿದರು.

ಸಂವಾದದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ನಮ್ಮ ರಾಷ್ಟ್ರೀಯ ನಾಯಕತ್ವವು ಕೈಗೊಂಡಿತ್ತು. ಜಮೀಯತುಲ್ ಉಲಮಾದ ಎರಡು ಬಣಗಳು ಚರ್ಚೆಯಲ್ಲಿ ಭಾಗವಹಿಸಿದ್ದವು. ಅವರು ಸಮುದಾಯದ ದೊಡ್ಡ ವಿಭಾಗವನ್ನು ಪ್ರತಿನಿಧಿಸುತ್ತಾರೆ. ಅಹ್ಲೇ ಹದೀಸ್, ಶಿಯಾ ಮತ್ತು ಅಜ್ಮೀರ್ ಚಿಶ್ತಿಯ ಪ್ರತಿನಿಧಿಗಳು ಮತ್ತು ಮುಸ್ಲಿಂ ವಿದ್ವಾಂಸರು ಭಾಗವಹಿಸಿದ್ದರು ಎಂದು ಅಲಿ ಹೇಳಿದ್ದಾರೆ.

"ಸಂವಾದದ ವೇಳೆ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯ ಸಮಸ್ಯೆಗಳನ್ನು ನಾವು ಪ್ರಸ್ತಾಪಿಸಿದ್ದೇವೆ. ಬುಲ್ಡೋಝರ್ ರಾಜಕಾರಣ ಮತ್ತು ಅಮಾಯಕರ ಬಂಧನದ ಕುರಿತೂ ಮಾತನಾಡಿದ್ದೇವೆ. ಈ ವೇಳೆ ಆರೆಸ್ಸೆಸ್ ಕಾಶಿ ಮತ್ತು ಮಥುರಾ ಮಸೀದಿ ವಿಷಯವನ್ನು ಪ್ರಸ್ತಾಪಿಸಿತು. ಇದು ಜನರ ನಂಬಿಕೆಯ ವಿಚಾರ ಎಂದರು. ನಾವು ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದೆವು. ಜಮಾಅತ್-ಎ-ಇಸ್ಲಾಮಿ ಯಾವಾಗಲೂ ಆರೆಸ್ಸೆಸ್ ನೊಂದಿಗೆ ಯಾವುದೇ ರೀತಿಯ ಇತ್ಯರ್ಥ ಸಂವಾದದ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತದೆ" ಎಂದು ಆರಿಫ್‌ ಅಲಿ ಹೇಳಿದರು.

"ಈ ಕುರಿತಾದ ಚರ್ಚೆಗಳು ಮುಂದುವರಿಯಲಿವೆ. ಎರಡನೇ ಹಂತದ ನಾಯಕರೊಂದಿಗೆ ಆರಂಭಿಕ ಮಾತುಕತೆ ನಡೆಸಲಾಗಿದೆ. ನಂತರ ಉನ್ನತ ಮಟ್ಟದ ನಾಯಕರ ನಡುವೆ ಚರ್ಚೆ ನಡೆಯಲಿದೆ" ಎಂದು ಸಂದರ್ಶನದ ವೇಳೆ ಅವರು ಉಲ್ಲೇಖಿಸಿದ್ದಾರೆ.

Similar News