ಢಾಬಾದ ಫ್ರಿಜ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ: ಪ್ರಿಯಕರ ಪೊಲೀಸ್‌ ವಶಕ್ಕೆ

Update: 2023-02-14 14:59 GMT

ಹೊಸದಿಲ್ಲಿ: ನೈಋತ್ಯ ದಿಲ್ಲಿಯ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಢಾಬಾವೊಂದರಲ್ಲಿ ಯುವತಿಯ ಶವವು ರೆಫ್ರಿಜರೇಟರ್‌ನಲ್ಲಿ ಪತ್ತೆಯಾಗಿದೆ.  ಪೊಲೀಸರು ಆಕೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಗ್ರಾಮದ ಹೊರವಲಯದಲ್ಲಿರುವ ಢಾಬಾದಲ್ಲಿ ಯುವತಿಯೊಬ್ಬಳನ್ನು ಕೊಲೆ ಮಾಡಿ ಶವವನ್ನು ಬಚ್ಚಿಟ್ಟಿರುವ ಬಗ್ಗೆ ಮಂಗಳವಾರ ಬೆಳಗ್ಗೆ ಮಾಹಿತಿ ಲಭಿಸಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ದ್ವಾರಕಾ) ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದಿದ್ದಾರೆ. ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಗೆಹ್ಲೋಟ್ ಎಂಬಾತನನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

 ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಾಹಿಲ್ ಮತ್ತು ಮೃತ ಯುವತಿ ಪರಸ್ಪರ ಸಂಬಂಧ ಹೊಂದಿದ್ದರು. ಮಿತ್ರಾನ್ ಗ್ರಾಮದ ನಿವಾಸಿಯಾದ ಸಾಹಿಲ್, ಹರಿಯಾಣದ ಜಜ್ಜರ್ ನಿವಾಸಿ ನಿಕ್ಕಿಯನ್ನು 2018 ರಲ್ಲಿ ಉತ್ತಮ್ ನಗರ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಗ ಭೇಟಿಯಾಗಿದ್ದನು. ಬಳಿಕ ಅವರು ಗ್ರೇಟರ್ ನೋಯ್ಡಾದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ‌

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಅವರು ತಮ್ಮ ಮನೆಗಳಿಗೆ ಮರಳಿದ್ದರು. ಲಾಕ್‌ಡೌನ್ ಮುಗಿದ ನಂತರ, ಅವರು ಮತ್ತೆ ದ್ವಾರಕಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ.

ಆರೋಪಿ ತನ್ನ ಸಂಬಂಧದ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಿರಲಿಲ್ಲ. ಸಾಹಿಲ್‌ನ ಮನೆಯವರು ಬೇರೊಬ್ಬ ಮಹಿಳೆಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು. ಅದರಂತೆ ಫೆಬ್ರವರಿ 10 ಕ್ಕೆ ಆತನ ಮದುವೆಯ ದಿನಾಂಕವನ್ನು ನಿಗದಿ ಪಡಿಸಿದ್ದು, ಇದಕ್ಕೆ ಯುವತಿ ಆಕ್ಷೇಪವೆತ್ತಿದ್ದಳು. ಇಬ್ಬರ ನಡುವಿನ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಪೊಲೀಸರ ಪ್ರಕಾರ, ಸಾಹಿಲ್ ತನ್ನ ಕಾರಿನಲ್ಲಿದ್ದ ಮೊಬೈಲ್ ಫೋನ್‌ನ ಡೇಟಾ ಕೇಬಲ್ ಸಹಾಯದಿಂದ ಯುವತಿಯ ಕತ್ತು ಹಿಸುಕಿ ಕೊಂದಿದ್ದಾನೆ.

  ಬಳಿಕ ಆತನ ಮಾಲೀಕತ್ವದಲ್ಲಿರುವ ಢಾಬಾಕ್ಕೆ ತೆರಳಿ ಆಕೆಯ ಮೃತದೇಹವನ್ನು ಫ್ರಿಜ್‌ ನಲ್ಲಿ ಇಟ್ಟು, ತನ್ನೂರಿಗೆ ತೆರಳಿ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ ಎಂದು indiatoday.in ವರದಿ ಮಾಡಿದೆ.

Similar News