×
Ad

ಭಾರತದ 10 ಲಕ್ಷ ಸರ್ಕಾರಿ ಶಾಲೆಗಳ ಪೈಕಿ ಶೇ. 20ಕ್ಕೆ ಮಾತ್ರ ಇಂಟರ್ನೆಟ್ ಸಂಪರ್ಕ: ವರದಿ

Update: 2023-02-15 13:12 IST

ಹೊಸ ದಿಲ್ಲಿ: ಭಾರತದಲ್ಲಿ ಒಟ್ಟು 10 ಲಕ್ಷ ಸರ್ಕಾರಿ ಶಾಲೆಗಳಿದ್ದು, ಈ ಪೈಕಿ ಶೇ. 20ರಷ್ಟು ಶಾಲೆಗಳು ಮಾತ್ರ ಅಂತರ್ಜಾಲ ಸಂಪರ್ಕ ಹೊಂದಿವೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಶ್ ಸರ್ಕಾರ್ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ದೇಶದಲ್ಲಿ ದಿಲ್ಲಿ ರಾಜ್ಯದಲ್ಲಿ ಮಾತ್ರ ಎಲ್ಲ 2762 ಸರ್ಕಾರಿ ಶಾಲೆಗಳಲ್ಲಿ ಅಂತರ್ಜಾಲ ಸೌಲಭ್ಯವಿದ್ದು, ಪುದುಚೇರಿ(422), ಚಂಡೀಗಢ(123)ದ ಎಲ್ಲ ಸರ್ಕಾರಿ ಶಾಲೆಗಳೂ ಅಂತರ್ಜಾಲ ಸೌಲಭ್ಯದೊಂದಿಗೆ ಸಜ್ಜುಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಶಿಕ್ಷಣ ಸಚಿವಾಲಯ ಅಭಿವೃದ್ಧಿಪಡಿಸಿರುವ ಏಕೀಕೃತ ಶಿಕ್ಷಣ ಮಾಹಿತಿ ವ್ಯವಸ್ಥೆ ದತ್ತಾಂಶದ ಪ್ರಕಾರ, ಲಕ್ಷದ್ವೀಪದಲ್ಲಿ 38 ಸರ್ಕಾರಿ ಶಾಲೆಗಳ ಪೈಕಿ 37 ಸರ್ಕಾರಿ ಶಾಲೆಗಳಿಗೆ ಅಂತರ್ಜಾಲ ಸೌಲಭ್ಯ ಒದಗಿಸಲಾಗಿದೆ. ಇನ್ನಿತರ ರಾಜ್ಯಗಳ ಪೈಕಿ ಕೇರಳದ 5,010 ಸರ್ಕಾರಿ ಶಾಲೆಗಳ ಪೈಕಿ 3,738 ಸರ್ಕಾರಿ ಶಾಲೆಗಳು ಅಂತರ್ಜಾಲ ಸೌಲಭ್ಯ ಹೊಂದಿವೆ. ಕೇರಳಕ್ಕೆ ಹೋಲಿಸಿದರೆ ಇತರ ದಕ್ಷಿಣ ರಾಜ್ಯಗಳ ಸಾಧನೆ ತೀರಾ ಕಳಪೆಯಾಗಿದೆ.

ಕರ್ನಾಟಕದ 49,679 ಸರ್ಕಾರಿ ಶಾಲೆಗಳ ಪೈಕಿ 5,308 ಸರ್ಕಾರಿ ಶಾಲೆಗಳಿಗೆ ಮಾತ್ರ ಅಂತರ್ಜಾಲ ಸೌಲಭ್ಯ ಒದಗಿಸಲಾಗಿದೆ. ತಮಿಳುನಾಡಿನ 37,636 ಶಾಲೆಗಳ ಪೈಕಿ 9,292 ಶಾಲೆಗಳು ಹಾಗೂ ಆಂಧ್ರಪ್ರದೇಶದ 45,137 ಶಾಲೆಗಳ ಪೈಕಿ 20,313 ಶಾಲೆಗಳು ಮಾತ್ರ ಅಂತರ್ಜಾಲ ಸೌಲಭ್ಯದಿಂದ ಸಜ್ಜುಗೊಂಡಿವೆ.

ಅಂತರ್ಜಾಲ ಸೌಲಭ್ಯ ಕಲ್ಪಿಸುವಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳು ಸೇರಿವೆ. ಈ ರಾಜ್ಯಗಳಲ್ಲಿ ಕ್ರಮವಾಗಿ 1,37,024 ಶಾಲೆಗಳ ಪೈಕಿ 12,074, 92,695 ಶಾಲೆಗಳ ಪೈಕಿ 16,469 ಹಾಗೂ 75,558 ಶಾಲೆಗಳ ಪೈಕಿ 4,421 ಶಾಲೆಗಳಿಗೆ ಮಾತ್ರ ಅಂತರ್ಜಾಲ ಸೌಲಭ್ಯ ಒದಗಿಸಲಾಗಿದೆ. ಅಂತರ್ಜಾಲ ಸೌಲಭ್ಯದ ಸಂಪರ್ಕ ಪಡೆಯಲು ಬಿಎಸ್‌ಎನ್‌ಎಲ್‌ನೊಂದಿಗೆ ಕರಾರು ಮಾಡಿಕೊಂಡು, ಎಲ್ಲ ಸರ್ಕಾರಿ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸೂಚನೆ ನೀಡಲಾಗಿದೆ ಎಂದು ಸರ್ಕಾರ್ ಲೋಕಸಭೆಗೆ ತಿಳಿಸಿದರು.

Similar News