15 ವರ್ಷ ಹಿಂದಿನ ಪ್ರಕರಣ: 2ನೇ ಬಾರಿ ಶಾಸಕ ಸ್ಥಾನದಿಂದ ಅನರ್ಹಗೊಂಡ ಯುಪಿ ಶಾಸಕ ಅಬ್ದುಲ್ಲಾ ಅಝಂ ಖಾನ್
ಲಕ್ನೊ: ಸಮಾಜವಾದಿ ಪಕ್ಷದ ಶಾಸಕ ಅಬ್ದುಲ್ಲಾ ಅಝಂ ಖಾನ್ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯಿಂದ ಬುಧವಾರ ಅನರ್ಹಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಝಂ ಖಾನ್ ಅವರ ಪುತ್ರರಾಗಿರುವ ಅಬ್ದುಲ್ಲಾ ಅಝಂ ಖಾನ್ ರನ್ನು ಅನರ್ಹಗೊಳಿಸುವುದು ಎರಡನೇ ಬಾರಿಯಾಗಿದೆ. ರಾಮ್‌ಪುರ ಜಿಲ್ಲೆಯ ಸುವಾರ್ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು.
"ಅಬ್ದುಲ್ಲಾ ಅಝಂ ಖಾನ್ ಅವರನ್ನು 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಎರಡು ವರ್ಷಗಳ (ಜೈಲಿನಲ್ಲಿ) ಶಿಕ್ಷೆ ವಿಧಿಸುವ ಮೊರಾದಾಬಾದ್ ನ್ಯಾಯಾಲಯದ ಆದೇಶದ ನಂತರ ಅವರನ್ನು ಅನರ್ಹಗೊಳಿಸಲಾಗಿದೆ. ಅವರ ಸ್ಥಾನವನ್ನು ಫೆಬ್ರವರಿ 13 ರಿಂದ ಖಾಲಿ ಎಂದು ಘೋಷಿಸಲಾಗಿದೆ" ಎಂದು ಅಸೆಂಬ್ಲಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾಪ್ರತಿನಿಧಿ ಕಾಯಿದೆಯಡಿ, ಒಬ್ಬ ಸಾರ್ವಜನಿಕ ಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಿದರೆ, ತಕ್ಷಣವೇ ಶಾಸಕಾಂಗ ಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗುತ್ತದೆ ಮತ್ತು ಶಿಕ್ಷೆಯನ್ನು ಅನುಭವಿಸಿದ ನಂತರ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಅಂತಹ ಅಭ್ಯರ್ಥಿ ಸ್ಪರ್ಧಿಸುವಂತಿಲ್ಲ.
ಡಿಸೆಂಬರ್ 31, 2007 ರಂದು ರಾಂಪುರದಲ್ಲಿ ನೆಲೆಗೊಂಡಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಶಿಬಿರದ ಮೇಲೆ ನಡೆದ ದಾಳಿಯ ತನಿಖೆಗಾಗಿ ಜನವರಿ 2, 2008 ರಂದು ಅಝಂ ಖಾನ್‌ರ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದನ್ನು ವಿರೋಧಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಲಾಗಿತ್ತು. ಈ ವೇಳೆ ಸಾರ್ವಜನಿಕ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ತಡೆಯೊಡ್ಡಿದ ಆರೋಪ ಅಬ್ದುಲ್ಲಾ ಅಝಂ ಖಾನ್ ಮೇಲಿತ್ತು.