ಬಿಬಿಸಿ ಕಚೇರಿಗಳ ಮೇಲೆ ದಾಳಿಗೆ ನ್ಯೂಸ್ ಬ್ರಾಡಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಸಿಯೇಷನ್ ಖಂಡನೆ

Update: 2023-02-15 15:56 GMT

ಹೊಸದಿಲ್ಲಿ,ಫೆ.15: ಬಿಬಿಸಿ ಇಂಡಿಯಾದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯ ಬಗ್ಗೆ ನ್ಯೂಸ್ ಬ್ರಾಡಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಸಿಯೇಷನ್ (NBDA) ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಬಿಬಿಸಿ ಎನ್ ಬಿಡಿಎ ಸದಸ್ಯನಾಗಿದೆ.

‘ಯಾವುದೇ ಸಂಸ್ಥೆಯು ಕಾನೂನಿಗಿಂತ ಮೇಲಲ್ಲ ಎನ್ನುವುದನ್ನು ತಾನು ಸಮರ್ಥಿಸುತ್ತೇನೆ,ಇದೇ ವೇಳೆ ಮಾಧ್ಯಮಗಳ ಧ್ವನಿಯನ್ನಡಗಿಸುವ ಮತ್ತು ಅವುಗಳಿಗೆ ಬೆದರಿಕೆಯನ್ನೊಡ್ಡುವ ಹಾಗೂ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮುಕ್ತ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪವನ್ನು ಮಾಡುವ ಯಾವುದೇ ಪ್ರಯತ್ನವನ್ನು ತಾನು ಖಂಡಿಸುತ್ತೇನೆ. ಇಂತಹ ಪ್ರಯತ್ನಗಳು ಸಂವಿಧಾನದಲ್ಲಿ ಹೇಳಲಾಗಿರುವ ವಾಕ್ ಸ್ವಾತಂತ್ರ್ಯದ ಮೂಲ ತತ್ತ್ವಗಳನ್ನು ದುರ್ಬಲಗೊಳಿಸುತ್ತವೆ ಹಾಗೂ ಪ್ರಜಾಪ್ರಭುತ್ವದ ಮುಕ್ತ ಮತ್ತು ನಿರ್ಭೀತ ಕಾರ್ಯಾಚರಣೆಯ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತವೆ ’ಎಂದು ಎನ್ಬಿಡಿಎ ಹೇಳಿಕೆಯಲ್ಲಿ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯ ಇಂತಹ ‘ಸರ್ವೆಗಳು’ ಮಾಧ್ಯಮಗಳಿಗೆ ನಿರಂತರ ಕಿರುಕುಳಗಳಿಗೆ ಕಾರಣವಾಗುತ್ತವೆ ಮತ್ತು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿ ಭಾರತದ ಪ್ರತಿಷ್ಠೆ ಮತ್ತು ವರ್ಚಸ್ಸಿನ ಮೇಲೂ ದುಷ್ಪರಿಣಾಮವನ್ನುಂಟು ಮಾಡುತ್ತದೆ ಎಂದು ತಿಳಿಸಿರುವ ಎನ್ಬಿಡಿಎ,ಸರಕಾರವು ತಾನು ನಡೆಸುವ ಯಾವುದೇ ತನಿಖೆಯು ಸಹಜ ನ್ಯಾಯ ಮತ್ತು ಪ್ರಚಲಿತ ಕಾನೂನಿನ ತತ್ತ್ವಗಳಿಗೆ ಅನುಗುಣವಾಗಿರುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.

Similar News