×
Ad

ತ್ರಿಪುರಾ ಮಹಿಳಾ ಆಯೋಗದ ಅಧ್ಯಕ್ಷೆಗೆ ಬಿಜೆಪಿ ಕಾರ್ಯಕರ್ತರಿಂದ ದಾಳಿ: ಆರೋಪ

Update: 2023-02-15 21:37 IST

ಅಗರ್ತಲಾ,ಫೆ.15: ಧಾಮನಗರದಲ್ಲಿ ಮಂಗಳವಾರ ತ್ರಿಪುರಾ ಮಹಿಳಾ ಆಯೋಗದ ಅಧ್ಯಕ್ಷೆ ಬರ್ನಾಲಿ ಗೋಸ್ವಾಮಿ(Barnali Goswami) ಅವರ ಮೇಲೆ ಬಿಜೆಪಿ (BJP)ಕಾರ್ಯಕರ್ತರು ದಾಳಿ ನಡೆಸಿರುವುದಾಗಿ ಪೊಲೀಸರಲ್ಲಿ ದೂರು ದಾಖಲಾಗಿದೆ.

ದಾಳಿಕೋರರಲ್ಲಿ ಕೆಲವು ಚುನಾಯಿತ ಬಿಜೆಪಿ ಕೌನ್ಸಿಲರ್ ಗಳು ಸೇರಿದ್ದಾರೆ ಎನ್ನಲಾಗಿದೆ.

ತಾನು ನೆರೆಮನೆಯವರನ್ನು ಭೇಟಿಯಾಗಲು ತೆರಳಿದ್ದಾಗ ಸುಮಾರು 200ರಷ್ಟು ಮಹಿಳೆಯರು ಮತ್ತು ಪುರುಷರಿದ್ದ ಗುಂಪು ತನ್ನ ಮೇಲೆ ದಾಳಿ ನಡೆಸಿದ್ದು,ತಾನು ಗಾಯಗೊಂಡಿದ್ದೇನೆ. ದಾಳಿಕೋರರು ತನ್ನ ಸೀರೆಯನ್ನು ಹರಿದಿದ್ದರು. ಹಲವಾರು ಪೋನ್ ಕರೆಗಳನ್ನು ಮಾಡಿದ್ದರೂ ಪೊಲೀಸರು ತನಗೆ ನೆರವಾಗಲಿಲ್ಲ ಎಂದು ಸ್ವತಃ ಹಿರಿಯ ಬಿಜೆಪಿ ನಾಯಕಿಯಾಗಿರುವ ಗೋಸ್ವಾಮಿ ತಿಳಿಸಿದರು.

ಘಟನೆಯ ಕುರಿತು ಪೊಲೀಸ್ ದೂರನ್ನು ದಾಖಲಿಸಿರುವ ಗೋಸ್ವಾಮಿ(Goswami),ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ(Manik Saha) ಅವರಿಗೂ ಮಾಹಿತಿಯನ್ನು ನೀಡಿದ್ದಾರೆ.

ಗೋಸ್ವಾಮಿಯವರ ಓರ್ವ ಸಹಚರ ಮತ್ತು ಅಂಗರಕ್ಷಕ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಗಾಗಿ ತನಗೆ ಬಿಜೆಪಿ ಟಿಕೆಟ್ ನಿರಾಕರಿಸಲ್ಪಟ್ಟ ಬಳಿಕ ಗೋಸ್ವಾಮಿ ಹಾಲಿ ಧಾಮನಗರ ಶಾಸಕ,ಬಿಜೆಪಿಯ ವಿಶ್ವಬಂಧು ಸೇನ್ ವಿರುದ್ಧ ಕೆಲಸ ಮಾಡಲು ಆರಂಭಿಸಿದ್ದರು ಎಂದು ಪಕ್ಷದೊಳಗಿನವರು ತಿಳಿಸಿದರು.

60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ ಫೆ.16ರಂದು ಚುನಾವಣೆ ನಡೆಯಲಿದ್ದು,ಮಾ.2ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.

Similar News