ಮುಟ್ಟಿನ ರಜೆಗೆ ನಿಯಮ ರೂಪಿಸುವಂತೆ ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ‌

Update: 2023-02-15 16:31 GMT

ಹೊಸದಿಲ್ಲಿ, ಫೆ. 15: ಮಹಿಳಾ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆಗಾಗಿ ನಿಯಮಗಳನ್ನು ರೂಪಿಸಲು ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು  ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್(Supreme Court) ಬುಧವಾರ ಒಪ್ಪಿಕೊಂಡಿದೆ.

ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ(D.Y. Chandrachud) ಅವರ ನೇತೃತ್ವದ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪೀಠ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ನಿಗದಿಪಡಿಸಿತು.

ದಿಲ್ಲಿ ನಿವಾಸಿ ಶೈಲೇಂದ್ರ ಮಣಿ ತ್ರಿಪಾಠಿ(Shailendra Mani Tripathi) ಅವರು ಸಲ್ಲಿಸಿದ ಅರ್ಜಿಯಲ್ಲಿ ಹೆರಿಗೆ ಸೌಲಭ್ಯ ಕಾಯ್ದೆ-1961ರ ಸೆಕ್ಷನ್ 14ನ್ನು ಅನುಸರಿಸಲು ಕೇಂದ್ರ ಹಾಗೂ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು. 

ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಪ್ರತಿಪಾದಿಸಿದ ಅರ್ಜಿದಾರರ ಪರ  ವಕೀಲ ವಿಶಾಲ್ ತಿವಾರಿ, ಬ್ರಿಟನ್, ಚೀನಾ, ವೇಲ್ಸ್, ಜಪಾನ್, ತೈವಾನ್, ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಸ್ಪೈನ್ ಹಾಗೂ ಝಾಂಬಿಯಾದಂತಹ ದೇಶಗಳಲ್ಲಿ ಈಗಾಗಲೇ ಒಂದಲ್ಲ ಒಂದು ರೀತಿಯಲ್ಲಿ ಮುಟ್ಟಿನ ನೋವಿನ ರಜೆ  ನೀಡಲಾಗುತ್ತಿದೆ ಎಂದು ತಿಳಿಸಿದರು. 

Similar News