ಯೂಟ್ಯೂಬ್‌ ನಲ್ಲಿ ಪಠಾಣ್‌ ಟ್ರೈಲರ್‌ ಮತ್ತು ಹಾಡು ನಿಷೇಧಿಸುವ ಮನವಿ ತಿರಸ್ಕರಿಸಿದ ಮಹಾರಾಷ್ಟ್ರ ನ್ಯಾಯಾಲಯ

Update: 2023-02-15 16:52 GMT

ಮುಂಬೈ: ಶಾರೂಖ್‌ ಖಾನ್‌ ನಟನೆಯ ಪಠಾಣ್ ಚಿತ್ರದ ಟ್ರೇಲರ್‌ಗಳು, ಟೀಸರ್‌ಗಳು ಮತ್ತು ಜಾಹೀರಾತುಗಳನ್ನು, ಬೇಶರಂ ರಂಗ್‌ ಹಾಡನ್ನು ಯೂಟ್ಯೂಬ್‌ ನಲ್ಲಿ ಪ್ರಸಾರ ಮಾಡದಂತೆ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಅನ್ನು ನಿರ್ಬಂಧಿಸಬೇಕೆಂಬ ಮನವಿಯನ್ನು ಮಹಾರಾಷ್ಟ್ರ ಸಿವಿಲ್ ನ್ಯಾಯಾಲಯವು ತಿರಸ್ಕರಿಸಿದೆ ಎಂದು barandbench ವರದಿ ಮಾಡಿದೆ.

ಮೇಲ್ನೋಟಕ್ಕೆ ಅರ್ಜಿದಾರರು ತಮ್ಮ ಪ್ರಕರಣವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಚಿತ್ರದ ಟೀಸರ್‌ಗಳು, ಟ್ರೇಲರ್‌ಗಳು, ಹಾಡುಗಳು ಮತ್ತು ಜಾಹೀರಾತುಗಳಿಗೆ ಮೊದಲು ಯು/ಎ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರವನ್ನು ಯೂಟ್ಯೂಬ್‌ನಲ್ಲಿ ತೋರಿಸದಿರುವುದರ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ನೀಡಿದ U/A ಪ್ರಮಾಣಪತ್ರವು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಷಕರೊಂದಿಗೆ ಸಿನಿಮಾ ಪ್ರದರ್ಶನ ವೀಕ್ಷಿಸಲು ಅನುಮತಿಸಲಾಗಿದೆ ಎಂದು ಸೂಚಿಸುತ್ತದೆ.

ಪತ್ರಿಕೆಗಳು, ಹೋರ್ಡಿಂಗ್‌ಗಳು, ಟ್ರೇಲರ್‌ಗಳು ಮತ್ತು ಟೀಸರ್‌ಗಳಲ್ಲಿ ಜಾಹೀರಾತು ಪ್ರಕಟಿಸುವ ಮೊದಲು ಸಿನಿಮಾಟೋಗ್ರಫಿ ಕಾಯ್ದೆಯಡಿ ಯು/ಎ ಪ್ರಮಾಣಪತ್ರವನ್ನು ಪ್ರದರ್ಶಿಸುವುದು ಅಗತ್ಯ ಎಂದು ಅರ್ಜಿದಾರರು ಹೇಳಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. ಪ್ರಮಾಣ ಪತ್ರ ತೋರಿಸದಿರುವುದರಿಂದ ತನಗೆ ಹಾಗೂ ಸಮಾಜಕ್ಕೆ ನಷ್ಟವಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದಾರೆ. ಆದರೆ, ಅರ್ಜಿದಾರರು ತಾನು ಯಾವ ನಷ್ಟವನ್ನು ಉಲ್ಲೇಖಿಸುತ್ತಿದ್ದೇನೆ ಎಂದು ಹೇಳಲಿಲ್ಲ ಎಂದು ವರದಿ ತಿಳಿಸಿದೆ.

ಯಶ್ ರಾಜ್ ಫಿಲ್ಮ್ಸ್ ಅನ್ನು ಪ್ರತಿನಿಧಿಸುವ ವಕೀಲ ಹರ್ಷ್ ಬುಚ್ ಅವರು ದಾವೆಯು ತಪ್ಪುದಾರಿಗೆಳೆಯುವಂತಿದೆ ಎಂದು ವಾದಿಸಿದರು. ಮೇಲ್ಮಟ್ಟದ ವೇದಿಕೆಯಲ್ಲಿ ಜಾಹೀರಾತು ಪ್ರಕಟಿಸುವಾಗ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ತೋರಿಸಬೇಕು ಎಂಬ ನಿಯಮವಿಲ್ಲ ಎಂದರು.

Similar News