ಚಗೋಸ್ ದ್ವೀಪದಲ್ಲಿ ಬ್ರಿಟನ್, ಅಮೆರಿಕದಿಂದ ಮನುಕುಲದ ವಿರುದ್ಧ ಅಪರಾಧ: ವರದಿ
ಲಂಡನ್, ಫೆ.15: ಬ್ರಿಟನ್ ಮತ್ತು ಅಮೆರಿಕ ದೇಶಗಳು ಚಗೋಸ್ ದ್ವೀಪಗಳಲ್ಲಿನ ಸ್ಥಳೀಯ ಸಮುದಾಯದವರನ್ನು ಬಲವಂತದಿಂದ ಸ್ಥಳಾಂತರಗೊಳಿಸುವ ಮೂಲಕ ಮನುಕುಲದ ವಿರುದ್ಧದ ಅಪರಾದ ಎಸಗಿವೆ ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆ (HRW) ಬುಧವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ
ಬ್ರಿಟನ್ ನ `ಜನಾಂಗೀಯ ಕಿರುಕುಳ ಮತ್ತು ಅಮೆರಿಕದ ಬೆಂಬಲದೊಂದಿಗೆ ಸ್ಥಳೀಯರನ್ನು ಮನೆಗೆ ಮರಳದಂತೆ ತಡೆಯುವ ಕೃತ್ಯವು ವಸಾಹತುಶಾಹಿ ಅಪರಾಧ ಮುಂದುವರಿಯುತ್ತಿರುವುದನ್ನು ಸೂಚಿಸಿದೆ' ಎಂದು 106 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಹಿಂದು ಮಹಾಸಾಗರದ ಚಗೋಸ್ ದ್ವೀಪಸಮುದಾಯದ ತಮ್ಮ ತಾಯ್ನಾಡಿಗೆ ಮರಳುವ ಹಕ್ಕು ಸೇರಿದಂತೆ ಎಲ್ಲಾ ಹಕ್ಕುಗಳನ್ನು ಮರುಸ್ಥಾಪಿಸಲು ಈ ಎರಡೂ ದೇಶಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಎಲ್ಲಾ ಚಗೋಸಿಯನ್ನರನ್ನು ಹಕ್ಕುಗಳಿಲ್ಲದ ಜನರೆಂದು ಪರಿಗಣಿಸುವ ಮೂಲಕ ಬ್ರಿಟನ್ ಇಂದು ಭಯಾನಕ ವಸಾಹತುಶಾಹಿ ಅಪರಾಧವನ್ನು ಎಸಗುತ್ತಿದೆ. ಚಗೋಸಿಯನ್ನರನ್ನು ಅವರ ಮನೆಗಳಿಂದ ಹೊರಹಾಕಿದ ಬ್ರಿಟನ್ ಮತ್ತು ಅಮೆರಿಕ ದೇಶಗಳು ತಾವು ಎಸಗಿದ ಹಾನಿಗೆ ಸಂಪೂರ್ಣ ಪರಿಹಾರವನ್ನು ಪಾವತಿಸಬೇಕು ಎಂದು ಹಿರಿಯ ಕಾನೂನು ಸಲಹೆಗಾರ ಮತ್ತು ವರದಿಯ ಮುಖ್ಯ ಲೇಖಕ ಕ್ಲೈವ್ ಬಾಲ್ಡ್ವಿನ್ ಹೇಳಿದ್ದಾರೆ.
1965ರಲ್ಲಿ ಚಗೋಸ್ ದ್ವೀಪಸಮುದಾಯವನ್ನು ಮಾರಿಷಸ್ನಿಂದ ಪ್ರತ್ಯೇಕಿಸಲು (ಆಗ ಮಾರಿಷಸ್ ಬ್ರಿಟನ್ ಸಾಮ್ರಾಜ್ಯದ ಭಾಗವಾಗಿತ್ತು) ಬ್ರಿಟನ್ ನಿರ್ಧರಿಸಿತು ಮತ್ತು ಅಲ್ಲಿನ ಡಿಯೆಗೊ ಗಾರ್ಸಿಯಾದಲ್ಲಿ ಅಮೆರಿಕದೊಂದಿಗೆ ಜಂಟಿ ಸೇನಾನೆಲೆಯನ್ನು ಸ್ಥಾಪಿಸಿದೆ. ಚಗೋಸ್ ದ್ವೀಪದ ಮೇಲೆ ಬ್ರಿಟನ್ ನಿಯಂತ್ರಣ ಮುಂದುವರಿದರೂ, 1968ರಲ್ಲಿ ಸ್ವತಂತ್ರ ಕಾಮನ್ವೆಲ್ತ್ ದೇಶವಾದ ಮಾರಿಷಸ್, ಚಗೋಸ್ ದ್ವೀಪವನ್ನು ಮರಳಿಸುವಂತೆ ಆಗ್ರಹ ಹೆಚ್ಚಿಸಿದ್ದು ಇದಕ್ಕೆ ಅಂತರಾಷ್ಟ್ರೀಯ ಸಮುದಾಯದ ಬೆಂಬಲ ದೊರಕಿದೆ.
2019ರಲ್ಲಿ ಮಾರಿಷಸ್ ಪರ ತೀರ್ಪು ನೀಡಿದ ಅಂತರಾಷ್ಟ್ರೀಯ ನ್ಯಾಯಾಲಯ, ಚಗೋಸ್ ದ್ವೀಪದ ನಿಯಂತ್ರಣವನ್ನು ಮಾರಿಷಸ್ಗೆ ವಹಿಸುವಂತೆ ಸೂಚಿಸಿತು. ಅದೇ ವರ್ಷಾಂತ್ಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ `ಚಗೋಸ್ ದ್ವೀಪಸಮುದಾಯವು ಮಾರಿಷಸ್ ಪ್ರಾಂತದ ಅವಿಭಾಜ್ಯ ಅಂಗವಾಗಿದೆ' ಎಂಬ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಗಿದ್ದು 6 ತಿಂಗಳೊಳಗೆ ಇಲ್ಲಿಂದ ಬ್ರಿಟನ್ ಹಿಂದೆ ಸರಿಯಬೇಕು ಎಂದು ನಿರ್ಣಯದಲ್ಲಿ ಶಿಫಾರಸು ಮಾಡಲಾಗಿತ್ತು.
ಚಗೋಸ್ ದ್ವೀಪಸಮುದಾಯದ ಭವಿಷ್ಯದ ಬಗ್ಗೆ ಚರ್ಚಿಸಲು ತನಗೆ ಒಪ್ಪಿಗೆಯಿದೆ ಎಂದು ಕಳೆದ ನವೆಂಬರ್ನಲ್ಲಿ ಬ್ರಿಟನ್ ಹೇಳಿತ್ತು. ಆದರೆ ಇದರ ಬೆನ್ನಲ್ಲೇ ಹೇಳಿಕೆ ನೀಡಿದ ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವೆರ್ಲಿ, ಚರ್ಚೆಯ ಫಲಿತಾಂಶ ಏನೇ ಆಗಿರಲಿ, ಡಿಯಾಗೊ ಗಾರ್ಸಿಯಾದ ಸೇನಾನೆಲೆಯ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದ್ದರು.
ಚಗೋಸಿಯನ್ನರ ಭವಿಷ್ಯದ ವಿಷಯಕ್ಕೆ ಸಂಬಂಧಿಸಿ ಇದುವರೆಗೆ ಯಾವುದೇ ಅರ್ಥಪೂರ್ಣ ಮಾತುಕತೆ ನಡೆದಿಲ್ಲ ಎಂದು ಎಚ್ಆರ್ಡಬ್ಯ್ಲೂ ಕಳವಳ ವ್ಯಕ್ತಪಡಿಸಿದೆ. ಮಾನವೀಯತೆಯ ವಿರುದ್ಧದ ಮೂರು ಅಪರಾಧಗಳನ್ನು ಗಮನಿಸಿದ್ದೇನೆ (ಬಲವಂತದ ಸ್ಥಳಾಂತರದ ನಿರಂತರ ವಸಾಹತುಶಾಹಿ ಅಪರಾಧ, ಅವರು ಮನೆಗೆ ಮರಳದಂತೆ ಬ್ರಿಟನ್ ತಡೆಯುತ್ತಿರುವುದು ಮತ್ತು ಜನಾಂಗ ಮತ್ತು ಜನಾಂಗೀಯತೆಯ ಆಧಾರದ ಮೇಲೆ ಬ್ರಿಟನ್ನಿಂದ ಕಿರುಕುಳ) ಎಂದು ವರದಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್ನ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯು `ಎಚ್ಆರ್ಡಬ್ಲ್ಯೂ ಜಗತ್ತಿನೆಲ್ಲೆಡೆ ನಡೆಸುತ್ತಿರುವ ಕಾರ್ಯವನ್ನು ನಾವು ಗೌರವಿಸುತ್ತೇವೆ. ಆದರೆ ಈ ಹೇಳಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ' ಎಂದಿದೆ.