ಭಯವಿಲ್ಲದೆ, ಲಾಭ ಮಾಡಿಕೊಡುವ ಉದ್ದೇಶವಿಲ್ಲದೆ ವರದಿ ಮಾಡುವುದನ್ನು ಮುಂದುವರಿಸುತ್ತೇವೆ: ಬಿಬಿಸಿ

59 ಗಂಟೆಗಳ ನಂತರ I-T ಸಮೀಕ್ಷೆಯು ಮುಕ್ತಾಯ

Update: 2023-02-17 06:43 GMT

ಹೊಸದಿಲ್ಲಿ: ಬಿಬಿಸಿಯ ದಿಲ್ಲಿ ಹಾಗೂ  ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಸಮೀಕ್ಷೆ ಕಾರ್ಯಾಚರಣೆ 59 ಗಂಟೆಗಳ ನಂತರ ಗುರುವಾರ ಮುಕ್ತಾಯಗೊಂಡಿದೆ. ಮೂರು ದಿನಗಳ ಕಾಲ ನಡೆದ ಸಮೀಕ್ಷೆಯಲ್ಲಿ ಅಧಿಕಾರಿಗಳು ವಿವಿಧ ದಾಖಲೆಗಳು ಹಾಗೂ  ಡೇಟಾವನ್ನು ಸಂಗ್ರಹಿಸಿದರು.

ತೆರಿಗೆ ಅಧಿಕಾರಿಗಳು  ದಿಲ್ಲಿ ಹಾಗೂ ಮುಂಬೈನಲ್ಲಿರುವ ನಮ್ಮ ಕಚೇರಿಗಳನ್ನು ತೊರೆದಿದ್ದಾರೆ ಎಂದು ಟ್ವಿಟರ್ ನಲ್ಲಿ ದೃಢಪಡಿಸಿದ  ಬಿಬಿಸಿಯ ಪತ್ರಿಕಾ ತಂಡವು, ಅಧಿಕಾರಿಗಳಿಗೆ ಸಹಕಾರವನ್ನು ಮುಂದುವರಿಸುತ್ತೇವೆ. ಈ ವಿಚಾರ ಬೇಗನೆ ಪರಿಹಾರ ಕಾಣುವ ವಿಶ್ವಾಸವಿದೆ. ಸುದೀರ್ಘ ವಿಚಾರಣೆಯನ್ನು ಎದುರಿಸಿದ ಅಥವಾ ರಾತ್ರಿಯಲ್ಲಿ ಉಳಿಯಬೇಕಾದ ಸ್ಥಿತಿ ಎದುರಿಸಿದ್ದ ನಮ್ಮ ಕೆಲವು ಸಿಬ್ಬಂದಿಯನ್ನು ಬೆಂಬಲಿಸುತ್ತೇವೆ. ನಮ್ಮ ಕೆಲಸ ಸಾಮಾನ್ಯ ಸ್ಥಿತಿಗೆ ಮರಳಿದೆ. ಭಾರತ ಹಾಗೂ ಅದರಾಚೆಗಿನ ನಮ್ಮ ಪ್ರೇಕಕ್ಷರಿಗೆ ಸೇವೆ ನೀಡಲು ಬದ್ಧರಾಗಿದ್ದೇವೆ. ಬಿಬಿಸಿ ನಂಬಿಕಸ್ಥ, ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದ್ದು ನಮ್ಮ ಸಹೋದ್ಯೋಗಿಗಳು ಹಾಗೂ ಪತ್ರಕರ್ತರ ಬೆನ್ನಿಗೆ ನಿಲ್ಲಲಿದ್ದು, ಅವರು ಯಾವುದೇ  "ಭಯವಿಲ್ಲದೆ ಅಥವಾ ಯಾರಿಗೂ ಲಾಭ ಮಾಡಿಕೊಡುವ ಉದ್ದೇಶವಿಲ್ಲದೆ ವರದಿ ಮಾಡುವುದನ್ನು ಮುಂದುವರಿಸುತ್ತಾರೆ'' ಎಂದು ಹೇಳಿದೆ.

ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಬಿಬಿಸಿ ಕಚೇರಿಗಳಿಗೆ ಆಗಮಿಸಿದೆ. ತನಿಖೆಯು ಬಿಬಿಸಿ ಅಂಗಸಂಸ್ಥೆ ಕಂಪನಿಗಳ ಅಂತರರಾಷ್ಟ್ರೀಯ ತೆರಿಗೆ ವಿಚಾರಗಳಿಗೆ ಸಂಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳು ಆಯ್ದ ಸಿಬ್ಬಂದಿಗಳಿಂದ ಹಣಕಾಸಿನ ಡೇಟಾವನ್ನು ಸಂಗ್ರಹಿಸಿದರು ಹಾಗೂ  ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಕಾಗದದ ಡೇಟಾದ ಪ್ರತಿಗಳನ್ನು ಮಾಡಿದರು. ಸಮೀಕ್ಷಾ ತಂಡಗಳು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಂತೆ, BBC ತನ್ನ ಉದ್ಯೋಗಿಗಳಿಗೆ ತಮ್ಮ ಎಲೆಕ್ಟ್ರಾನಿಕ್ ಸಾಧನಗಳಿಂದ ಯಾವುದೇ ಡೇಟಾವನ್ನು ಅಳಿಸದಂತೆ ಕೇಳಿಕೊಂಡಿತು.

ತೆರಿಗೆ ಅಧಿಕಾರಿಗಳು  ಬಿಬಿಸಿಯ ಸಂಪಾದಕರೊಂದಿಗೆ ದಾಖಲೆಯನ್ನು ಹಂಚಿಕೊಂಡಿದ್ದು, ಅದರಲ್ಲಿ ಮೂರು ದಿನಗಳ ಕಾಲ ಸಮೀಕ್ಷೆಯನ್ನು ನಡೆಸಲು ಅನುಮತಿಯನ್ನು ಹೊಂದಿದ್ದೇವೆಂದು ತಿಳಿಸಲಾಗಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

Similar News