ವಾಹನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆ: ಗೋರಕ್ಷಣೆಯ ಹೆಸರಿನಲ್ಲಿ ಕೊಲೆ ಶಂಕೆ
ಸಾವಿಗೂ ಮೊದಲು ಬಜರಂಗದಳಕ್ಕೆ ಸೇರಿದವರು ಅಪಹರಿಸಿದ್ದರೆಂದು ಆರೋಪಿಸಿದ ಕುಟುಂಬಸ್ಥರು
ಭರತ್‌ಪುರ್ : ಹರ್ಯಾಣಾದ ಭಿವಾನಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಮಹೀಂದ್ರ ಬೊಲೇರೊ ಎಸ್‌ಯುವಿ ಯೊಳಗೆ ಇಬ್ಬರು ವ್ಯಕ್ತಿಗಳ ಸುಟ್ಟು ಕರಕಲಾದ ಮೃತದೇಹಗಳು ಪತ್ತೆಯಾಗಿವೆ. ಗೋರಕ್ಷಣೆಯ ಹೆಸೆರಿನಲ್ಲಿ ನಡೆದ ಕ್ರೌರ್ಯದಲ್ಲಿ ಈ ಇಬ್ಬರು ಬಲಿಯಾಗಿರಬೇಕೆಂಬ ಶಂಕೆ ಅವರ ಕುಟುಂಬದಿಂದ ವ್ಯಕ್ತವಾಗಿದ್ದು, ಮೃತರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಐದು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಾಸಿರ್ (25) ಹಾಗೂ ಜುನೈದ್ (35) ಮೃತಪಟ್ಟವರು. ಅವರನ್ನು ಬುಧವಾರ ರಾಜಸ್ಥಾನದ ಭರತಪುರ್ ಜಿಲ್ಲೆಯಿಂದ ಬಜರಂಗದಳಕ್ಕೆ ಸೇರಿದವರು ಅಪಹರಿಸಿದ್ದರೆಂದು ಅವರ ಕುಟುಂಬಗಳು ಆರೋಪಿಸಿವೆ.
ಆರೋಪಿಗಳನ್ನು ಮೋನು ಮನೇಸರ್, ಲೋಕೇಶ್ ಸಿಂಘಿಯಾ, ರಿಂಕು ಸೈನಿ, ಅನಿಲ್ ಮತ್ತು ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಮನೇಸರ್ ಬಜರಂಗದಳ ಸದಸ್ಯನಾಗಿದ್ದು ಆರೋಪಿಗಳೆಲ್ಲರೂ ತಮ್ಮನ್ನು ಗೋರಕ್ಷಕರೆಂದು ಗುರುತಿಸಿಕೊಂಡವರಾಗಿದ್ದಾರೆ ಎಂದು thewire.in ವರದಿ ಮಾಡಿದೆ.
ಗುರುವಾರ ಬೆಳಿಗ್ಗೆ ಹರ್ಯಾಣದ ಭಿವಾನಿಯಲ್ಲಿ ಬೊಲೆರೋ ವಾಹನದಲ್ಲಿ ಅವರ ಮೃತದೇಹಗಳು ಪತ್ತೆಯಾಗಿದ್ದು ಈ ಕಳೇಬರಗಳು ನಾಸಿರ್ ಮತ್ತು ಜುನೈದ್ ಅವರದ್ದೇ ಎಂಬುದನ್ನು ದೃಢೀಕರಿಸಲು ಹಾಗೂ ಸಾವಿನ ಕಾರಣ ತಿಳಿಯಲು ಪೊಲೀಸರು ಯತ್ನಗಳನ್ನು ಮುಂದುವರಿಸಿದ್ದಾರೆ. ಪೋಸ್ಟ್ ಮಾರ್ಟಂ ಮತ್ತು ಡಿಎನ್‌ಎ ಪರೀಕ್ಷೆಗಳ ಬಳಿಕ ಮೃತದೇಹಗಳ ಗುರುತು ದೃಢೀಕರಿಸಲಾಗುವುದೆಂದು ತಿಳಿದು ಬಂದಿದೆ.
ಅವರನ್ನು ಜೀವಂತ ಸುಡಲಾಗಿತ್ತೇ ಅಥವಾ ಕಾರಿಗೆ ಬೆಂಕಿ ಹತ್ತಿ ಅವರು ಸತ್ತರೇ ಎಂಬುದು ತಿಳಿದು ಬಂದಿಲ್ಲ. ಈ ವಾಹನವು ನಾಸಿರ್ ಮತ್ತು ಜುನೈದ್ ಅವರಿಗೆ ತಿಳಿದಿರುವ ವ್ಯಕ್ತಿಯದ್ದೆಂದು ಅವರ ಕುಟುಂಬಗಳು ತಿಳಿಸಿವೆ.
ಮೃತರ ಕುಟುಂಬ ಸದಸ್ಯರ ಪ್ರಕಾರ ಅವರನ್ನು ಅಪಹರಿಸಿದ್ದ ಬಜರಂಗದಳದವರು ಅವರನ್ನು ನಂತರ ಫಿರೋಝಪುರ್ ಝಿರ್ಕಾ ಠಾಣೆಗೆ ಕರೆದೊಯ್ದಿದ್ದರು. ಆದರೆ ಅವರಿಬ್ಬರಿಗೂ ಅದಾಗಲೇ ಹಲ್ಲೆಯಿಂದ ತೀವ್ರ ಗಾಯಗಳಾಗಿದ್ದರಿಂದ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿರಲಿಲ್ಲ, ಎಂದು ಮೃತರ ಕುಟುಂಬ ಸದಸ್ಯರು ಹೇಳಿದ್ದಾರೆ.
ಪೊಲೀಸರ ಪ್ರಕಾರ ಜುನೈದ್ ವಿರುದ್ಧ ಗೋಕಳ್ಳಸಾಗಣಿಕೆಯ ಐದು ಪ್ರಕರಣಗಳಿದ್ದರೆ, ನಾಸಿರ್ ವಿರುದ್ಧ ಯಾವುದೇ ಕ್ರಮಿನಲ್ ಪ್ರಕರಣವಿರಲಿಲ್ಲ ಎಂದು ವರದಿಯಾಗಿದೆ.