×
Ad

ಸೆಲ್ಫಿಗೆ ನಿರಾಕರಿಸಿದ ಕ್ರಿಕೆಟಿಗ ಪೃಥ್ವಿ ಶಾ ಕಾರಿನ ಮೇಲೆ ದಾಳಿ: ಸೋಷಿಯಲ್ ಮೀಡಿಯಾ ಸ್ಟಾರ್ ಸಪ್ನಾ ಗಿಲ್ ಬಂಧನ

Update: 2023-02-17 12:23 IST

ಮುಂಬೈ: ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಅವರು ಸೆಲ್ಫಿಗೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಅಭಿಮಾನಿಗಳು ಅವರ ಕಾರಿನ ಮೇಲೆ ಬೇಸ್‌ಬಾಲ್ ಬ್ಯಾಟ್‌ನಿಂದ ದಾಳಿ ನಡೆಸಿರುವ ಘಟನೆ ಒಶಿವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಸಹಾರಾ ತಾರಾ ಹೋಟೆಲ್‌ನಲ್ಲಿ ಜರುಗಿದೆ. ಈ ಸಂಬಂಧ ಪೃಥ್ವಿ ಶಾ ಮತ್ತವರ ಗೆಳೆಯರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಎಂಟು ಮಂದಿಯ ವಿರುದ್ಧ ಗಲಭೆ, ಸುಲಿಗೆ ಮತ್ತು ಅಪರಾಧದ ದುರುದ್ದೇಶ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಸೋಷಿಯಲ್ ಮೀಡಿಯಾ ಸ್ಟಾರ್ ಸಪ್ನಾ ಗಿಲ್ (Sapna Gill) ಎಂಬ ಯುವತಿಯನ್ನು ಬಂಧಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಈ ಘಟನೆಯು ಬುಧವಾರ ಮುಂಜಾನೆ ಸಹಾರಾ ತಾರಾ ಹೋಟೆಲ್‌ನ ಕೆಫೆಯೊಂದರಲ್ಲಿ ಇಬ್ಬರು ಅಪರಿಚಿತರು ಪೃಥ್ವಿ ಶಾರನ್ನು ಸೆಲ್ಫಿಗಾಗಿ ಭೇಟಿ ಮಾಡಿದಾಗ ಸಂಭವಿಸಿದೆ ಎಂದು ತಿಳಿಸಿರುವ ಪೊಲೀಸರು, ಅವರು ಪೃಥ್ವಿ ಶಾರಿಗೆ ಭಾವಚಿತ್ರಕ್ಕಾಗಿ ಒಂದೇ ಸಮನೆ ಪೀಡಿಸತೊಡಗಿದಾಗ, ಅವರಿಬ್ಬರನ್ನೂ ಹೋಟೆಲ್ ಸಿಬ್ಬಂದಿಗಳು ಹೊರಗೆ ಕರೆದೊಯ್ದರು. ಆದರೆ, ಹೋಟೆಲ್ ಹೊರಗೆ ಪೃಥ್ವಿ ಶಾಗಾಗಿ ಕಾದಿರುವ ಆ ಇಬ್ಬರು, ಪೃಥ್ವಿ ಶಾ ಹೋಟೆಲ್‌ನಿಂದ ಹೊರ ಬಂದಾಗ ಬೇಸ್‌ಬಾಲ್ ಬ್ಯಾಟ್‌ನಿಂದ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

 ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಪೊಲೀಸರ ಪ್ರಕಾರ, ದೂರು ನೀಡಿರುವ ಆಶಿಶ್ ಯಾದವ್, ಪೃಥ್ವಿ ಶಾ ಮತ್ತು ಬೃಜೇಶ್ ಅವರು ನಾಗರಿಕ ವಿಮಾನ ನಿಲ್ದಾಣದ ಬಳಿ ಇರುವ ಸಹಾರಾ ಹೋಟೆಲ್‌ಗೆ ತೆರಳಿದ್ದರು. ಅವರು ಭೋಜನ ಸೇವಿಸುತ್ತಿರುವಾಗ ಓರ್ವ ಯುವತಿ ಸೇರಿದಂತೆ ಇಬ್ಬರು ಪೃಥ್ವಿ ಶಾರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದಿದ್ದಾರೆ. ಮೊದಲಿಗೆ ಪೃಥ್ವಿ ಶಾ ಅವರಿಗೆ ಸಹಕಾರ ನೀಡಿದರಾದರೂ, ಅವರು ಮತ್ತಷ್ಟು ಸೆಲ್ಫಿ ಭಾವಚಿತ್ರಕ್ಕಾಗಿ ಪೀಡಿಸತೊಡಗಿದರು ಎಂದು ತಿಳಿಸಿದ್ದಾರೆ.

ಹೆಚ್ಚು ಭಾವಚಿತ್ರಗಳಿಗೆ ಪೋಸ್ ನೀಡಲು ಪೃಥ್ವಿ ಶಾ ನಿರಾಕರಿಸಿದಾಗ ಆ ಇಬ್ಬರು ಅವರೊಂದಿಗೆ ದುರ್ನಡತೆ ಪ್ರದರ್ಶಿಸಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿರುವ ಆಶಿಶ್ ಯಾದವ್, "ನಾವು ಭೋಜನ ಮುಗಿಸಿ ಹೋಟೆಲ್‌ನಿಂದ ಹೊರಗೆ ತೆರಳಿದಾಗ ಆ ಇಬ್ಬರ ಪೈಕಿ ಒಬ್ಬಾತ ಬೇಸ್‌ಬಾಲ್ ಬ್ಯಾಟ್ ಹಿಡಿದುಕೊಂಡು ಹೋಟೆಲ್ ಹೊರಗೆ ನಿಂತಿದ್ದ. ನಾವು ಕಾರಿನಲ್ಲಿ ಕುಳಿತಿದ್ದಾಗ ಹತ್ತಿರ ಬಂದ ಆತ, ಬೇಸ್‌ಬಾಲ್ ಬ್ಯಾಟ್‌ನಿಂದ ಕಾರಿನ ಮುಂಭಾಗದ ಗಾಜಿನ ಮೇಲೆ ದಾಳಿ ನಡೆಸಿದ" ಎಂದು ತಿಳಿಸಿದ್ದಾರೆ.

ಆರೋಪಿ ಮಹಿಳೆಯು ಪೃಥ್ವಿ ಶಾ ಮತ್ತು ಸಂಗಡಿಗರ ವಿರುದ್ಧ ಸುಳ್ಳು ದೂರು ದಾಖಲಿಸುವುದಾಗಿ ಬೆದರಿಕೆ ಒಡ್ಡಿ, ರೂ. 50,000ಕ್ಕೆ ಬೇಡಿಕೆ ಇಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವಲಯ ಒಂಬತ್ತರ ಉಪ ಪೊಲೀಸ್ ಆಯುಕ್ತ ಅನಿಲ್ ಪರಾಸ್ಕರ್, "ಮಹಿಳೆಯು ಪೊಲೀಸ್ ಠಾಣೆಗೆ ಕರೆ ಕೂಡಾ ಮಾಡಿದ್ದಳು. ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದಾಗ, ಸಮಸ್ಯೆಯು ಬಗೆಹರಿದಿದೆ ಎಂದು ಗಸ್ತು ಪೊಲೀಸರಿಗೆ ತಿಳಿಸಿದ್ದಳು" ಎಂದು ಹೇಳಿದ್ದಾರೆ.

ಈ ಸಂಬಂಧ ಬುಧವಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಂಕಿತ ಆರೋಪಿಗಳ ಹುಡುಕಾಟ ಕೈಗೆತ್ತಿಕೊಂಡಿದ್ದಾರೆ. "ನಾವು ಕೆಲವು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ ಮತ್ತು ಅವರ ವಿಚಾರಣೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ತಮ್ಮ ಕಕ್ಷಿದಾರರ ಮೇಲಿನ ಆರೋಪವನ್ನು ಅಲ್ಲಗಳೆದಿರುವ ಸಪ್ನಾ ಗಿಲ್ ಪರ ವಕೀಲ ಕಾಶಿಫ್ ಖಾನ್ ದೇಶ್‌ಮುಖ್, ಪೃಥ್ವಿ ಶಾ ವಿರುದ್ಧವೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324, 354 ಮತ್ತು 509ರ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ರಾಜೀನಾಮೆ

Similar News