ಭಾರತದಲ್ಲಿದ್ದ ಎರಡು ಕಚೇರಿಯನ್ನು ಮುಚ್ಚಿ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಿದ ಎಲಾನ್ ಮಸ್ಕ್

Update: 2023-02-17 09:14 GMT

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮವಾದ ಟ್ವಿಟರ್ (Twitter) ಅನ್ನು ಪುನರುಜ್ಜೀವನಗೊಳಿಸುವ ಎಲಾನ್ ಮಸ್ಕ್ (Elon Musk) ಕಾರ್ಯಾಚರಣೆಯ ಭಾಗವಾಗಿ ಭಾರತದಲ್ಲಿದ್ದ ಮೂರು ಟ್ವಿಟರ್ ಕಚೇರಿಗಳ ಪೈಕಿ ಎರಡು ಕಚೇರಿಗಳ ಬಾಗಿಲು ಮುಚ್ಚಲಾಗಿದ್ದು, ಅಲ್ಲಿನ ಸಿಬ್ಬಂದಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು bqprime.com ವರದಿ ಮಾಡಿದೆ.

ಕಳೆದ ವರ್ಷ ತನ್ನ ಭಾರತದಲ್ಲಿನ ಸಿಬ್ಬಂದಿಗಳ ಪೈಕಿ ಶೇ. 90ರಷ್ಟು ಮಂದಿ, ಅಂದರೆ 200ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾಗೊಳಿಸಿದ್ದ ಟ್ವಿಟರ್, ಹೊಸದಿಲ್ಲಿಯಲ್ಲಿನ ರಾಜಕೀಯ ಕೇಂದ್ರ ಹಾಗೂ ಮುಂಬೈನ ಆರ್ಥಿಕ ಸಂಕೀರ್ಣದಲ್ಲಿನ ಕಚೇರಿಗಳ ಬಾಗಿಲನ್ನು ಮುಚ್ಚಿತ್ತು. ಈ ಸಂಗತಿ ಜನರಿಗೂ ತಿಳಿದಿದೆ ಎಂದು ಟ್ವಿಟರ್ ಪ್ರತಿಪಾದಿಸಿತ್ತು. ಹೀಗಿದ್ದೂ ದಕ್ಷಿಣ ಭಾರತದಲ್ಲಿನ ಬೆಂಗಳೂರು ತಾಂತ್ರಿಕ ಸಂಕೀರ್ಣದ ಕಚೇರಿ ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಈ ಕಚೇರಿಯಲ್ಲಿ ಬಹುತೇಕ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳು ತಿಳಿಸಿವೆ.

ಕೋಟ್ಯಧಿಪತಿ ಕಾರ್ಯನಿರ್ವಹಣಾಧಿಕಾರಿಯಾದ ಎಲಾನ್ ಮಸ್ಕ್, 2023ರ ಅಂತ್ಯದ ವೇಳೆಗೆ ಟ್ವಿಟರ್‌ಗೆ ಆರ್ಥಿಕ ಸ್ಥಿರತೆ ತರಲು ಜಗತ್ತಿನಾದ್ಯಂತ ಉದ್ಯೋಗ ಕಡಿತ ನೀತಿ ಜಾರಿಗೊಳಿಸಿದ್ದರು. ಹೀಗಿದ್ದೂ ಅಮೆರಿಕಾದ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನಿಂದ ಆಲ್ಫಾಬೆಟ್ ಇಂಕ್‌ನ ಗೂಗಲ್‌ವರೆಗಿನ ಎಲ್ಲ ತಾಂತ್ರಿಕ ದೈತ್ಯ ಕಂಪನಿಗಳ ಪಾಲಿಗೂ ಭಾರತವೇ ಮುಖ್ಯ ಮಾರುಕಟ್ಟೆಯಾಗಿದ್ದು, ಈ ಎಲ್ಲ ದೈತ್ಯ ಸಂಸ್ಥೆಗಳೂ ಜಗತ್ತಿನಾದ್ಯಂತ ವೇಗವಾದ ಬೆಳವಣಿಗೆ ಕಾಣುತ್ತಿರುವ ಅಂತರ್ಜಾಲ ವಲಯದ ಮೇಲೆ ಪಣ ಒಡ್ಡಿವೆ. ಆದರೆ, ಮಸ್ಕ್ ಇತ್ತೀಚಿನ ನಡೆಗಳು ಅವರು ಸದ್ಯಕ್ಕೆ ಮಾರುಕಟ್ಟೆ ಬಗ್ಗೆ ಕಡಿಮೆ ಪ್ರಾಮುಖ್ಯತೆ ನೀಡಿದ್ದಾರೆ ಎಂಬುದನ್ನು ತೋರಿಸುತ್ತಿವೆ ಎಂದು ವರದಿಯಾಗಿದೆ.

ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಲು ಟ್ವಿಟರ್ ನಿರಾಕರಿಸಿದೆ.

ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ

Similar News