×
Ad

ಸರ್ಕಾರದ ದೀಕ್ಷಾ ಆ್ಯಪ್‌ನಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳ, ಶಿಕ್ಷಕರ ಮಾಹಿತಿ ಸೋರಿಕೆ

ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ ಇಂಟರ್ನೆಟ್‌ ರಿಸರ್ಚ್‌ ಫೌಂಡೇಶನ್

Update: 2023-02-17 17:14 IST

ಹೊಸದಿಲ್ಲಿ: ದೀಕ್ಷಾ (DIKSHA) ಆ್ಯಪ್‌ನಲ್ಲಿ ನೋಂದಾಯಿತ ಲಕ್ಷಾಂತರ  ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎಂಬ ವರದಿಗಳ ಕುರಿತು ತನ್ನ ಕಳವಳ ವ್ಯಕ್ತಪಡಿಸಿ ಇಂಟರ್ನೆಟ್‌ ಫ್ರೀಡಂ ಫೌಂಡೇಶನ್‌ (IFF) ಎಂಬ ಲಾಭ ರಹಿತ ಸಂಸ್ಥೆಯು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಪ್ರಿಯಾಂಕ್‌ ಕನೂಂಗೊ ಅವರಿಗೆ ಪತ್ರ ಬರೆದಿದೆ.

ಡೇಟಾ ಸೋರಿಕೆ ಕುರಿತಂತೆ ಈ ಹಿಂದೆ ವೈರ್ಡ್‌ ಮತ್ತು  ಹ್ಯೂಮನ್‌ ರೈಟ್ಸ್‌ ವಾಚ್‌ ಸಂಸ್ಥೆಗಳ ವರದಿಗಳನ್ನೂ ಇಂಟರ್ನೆಟ್‌ ಫ್ರೀಡಂ ಫೌಂಡೇಶನ್‌ ಉಲ್ಲೇಖಿಸಿದೆ.

ಸರ್ಕಾರದ ದೀಕ್ಷಾ ಆ್ಯಪ್‌ನಲ್ಲಿನ ಲೋಪವೊಂದರಿಂದಾಗಿ ದೇಶದ ಸುಮಾರು 6 ಲಕ್ಷ ವಿದ್ಯಾರ್ಥಿಗಳ ಕುರಿತಾದ ವಿವರಗಳು ಸೋರಿಕೆಯಾಗಿರುವ ಸಾಧ್ಯತೆಯ ಬಗ್ಗೆ ವರದಿಯೊಂದು ಈ ಹಿಂದೆಯೇ ಉಲ್ಲೇಖಿಸಿತ್ತು.

ಈ ಆ್ಯಪ್‌ನ ಡೇಟಾವನ್ನು ಅಸಂರಕ್ಷಿತ ಕ್ಲೌಡ್‌ ಸರ್ವರ್‌ನಲ್ಲಿ ಸಂಗ್ರಹಿಸಿದ ಪರಿಣಾಮ ವಿದ್ಯಾರ್ಥಿಗಳ ಹೆಸರುಗಳು, ಇಮೇಲ್‌ ಐಡಿಗಳು, ಶಾಲಾ ಹಿನ್ನೆಲೆಗಳ ಕುರಿತ ವಿವರಗಳು ಸೋರಿಕೆಯಾಗಿರುವ ಸಾಧ್ಯತೆಯಿದೆಯೆನ್ನಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಈ ಆ್ಯಪ್‌ ಅನ್ನು 2017 ರಲ್ಲಿ ಶಿಕ್ಷಕರಿಗೆ ಕಲಿಕಾ ವಿಚಾರಗಳನ್ನು ಒದಗಿಸುವ ಮೂಲಕ ಅವರ ಸಬಲೀಕರಣ ಉದ್ದೇಶದಿಂದ ಆರಂಭಿಸಿತ್ತು. ಆದರೆ ಕೋವಿಡ್‌ ಸಾಂಕ್ರಾಮಿಕದ ನಂತರ ಈ ಆ್ಯಪ್‌ ಮೂಲಕ ಸಂವಾದಾತ್ಮಕ ರೀತಿಯಲ್ಲಿ 1 ರಿಂದ 12ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಕಾರಿಯಾಗುವ ವಿಷಯಗಳನ್ನು ಸೇರಿಸಿತ್ತು.

ವೈರ್ಡ್‌ ವರದಿಯ ಪ್ರಕಾರ  ದೀಕ್ಷಾ (ಡಿಜಿಟಲ್‌ ಇನ್‌ಫ್ರಾಸ್ಟ್ರಕ್ಚರ್‌ ಫಾರ್‌ ನಾಲೆಜ್‌ ಶೇರಿಂಗ್‌ ಆ್ಯಪ್‌) ದಲ್ಲಿನ ದೋಷವನ್ನು ಇಂಗ್ಲೆಂಡ್‌ ಮೂಲದ ಸೆಕ್ಯುರಿಟಿ ಸಂಶೋಧಕರೊಬ್ಬರು ಪತ್ತೆ ಹಚ್ಚಿದ್ದರು. ಆದರೆ ಈ ಸಂಶೋಧಕರ ಹೆಸರನ್ನು ವೈರ್ಡ್‌ ಬಹಿರಂಗಗೊಳಿಸದೇ ಇದ್ದರೂ, ಹ್ಯೂಮನ್‌ ರೈಟ್ಸ್‌ ವಾಚ್‌ ಪ್ರಕಾರ ಇಂಟಲಿಜೆನ್ಸ್‌ ಸಾಫ್ಟ್‌ವೇರ್‌ ಕಂಪೆನಿ ಅಂಡುಯಿನ್‌ ಇದರ ಸಹ-ಸ್ಥಾಪಕ ನಥಾನಿಯಲ್‌ ಫ್ರೈಡ್‌ ಈ ಲೋಪವನ್ನು ಪತ್ತೆಹಚ್ಚಿದ್ದರು.

ವರದಿಯ ಪ್ರಕಾರ 10 ಲಕ್ಷಕ್ಕೂ ಅಧಿಕ ಶಿಕ್ಷಕರ ಹೆಸರುಗಳು, ಫೋನ್‌ ನಂಬರ್‌ಗಳು ಮತ್ತು ಇಮೇಲ್‌ ವಿಳಾಸಗಳನ್ನು ಕ್ಲೌಡ್‌ ಸರ್ವರ್‌ ಒಂದರಲ್ಲಿ ಅಸುರಕ್ಷಿತವಾಗಿ ಇರಿಸಲಾಗಿದೆ. ಇವುಗಳ ಹೊರತಾಗಿ ಕೆಲ ವಿದ್ಯಾರ್ಥಿಗಳ ಇಮೇಲ್‌ ವಿಳಾಸ, ಫೋನ್‌ ಸಂಖ್ಯೆಗಳನ್ನು ಭಾಗಶಃ ಮರೆಮಾಚಲಾಗಿದೆಯಾದರೂ  ವಿದ್ಯಾರ್ಥಿಗಳ ಪೂರ್ಣ ಹೆಸರು, ಶಾಲೆ, ದಾಖಲಾತಿ ದಿನಾಂಕ ಮತ್ತು ಕೋರ್ಸ್‌ ಪೂರ್ಣಗೊಳಿಸುವಿಕೆ ವಿಚಾರಗಳು ಎಲ್ಲರಿಗೂ ಕಾಣುವಂತಿದೆ. ಕೆಲ ಸೋರಿಕೆಯಾದ ಡೇಟಾ ಗೂಗಲ್‌ನಲ್ಲೂ ಲಭ್ಯವಿದೆ ಏಕೆಂದರೆ ಮೈಕ್ರೊಸಾಫ್ಟ್‌ ಅಝೂರ್‌ನಲ್ಲಿ ಹೋಸ್ಟ್‌ ಮಾಡಲಾದ ಕ್ಲೌಡ್‌ ಸರ್ವರ್‌ ಅನ್ನು ಅಸುರಕ್ಷಿತವಾಗಿ ಇರಿಸಲಾಗಿದೆ ಎಂದು ವರದಿ ಹೇಳಿದೆ.

ದೀಕ್ಷಾ ಆ್ಯಪ್‌ ಅನ್ನು ಇನ್ಫೋಸಿಸ್‌ ಸಹಸ್ಥಾಪಕ ನಂದನ್‌ ನಿಲೇಕಣಿ ಅವರು ಸಹ-ಸ್ಥಾಪಕರಾಗಿರುವ ಏಕ್‌ಸ್ಟೆಪ್‌ ಎಂಬ ಫೌಂಡೇಶನ್‌ ಅಭಿವೃದ್ಧಿಪಡಿಸಿತ್ತು.

Similar News