ಗೃಹಬಂಧನವನ್ನು ಸ್ಥಳಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಾಮಾಜಿಕ ಹೋರಾಟಗಾರ ಗೌತಮ್‌ ನವ್ಲಾಖಾ

Update: 2023-02-17 12:17 GMT

ಹೊಸದಿಲ್ಲಿ: ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವ್ಲಾಖಾ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಗೃಹಬಂಧನವನ್ನು ಸ್ಥಳಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ. 

ಎಲ್ಗಾರ್ ಪರಿಷದ್ ಪ್ರಕರಣ ಹಾಗೂ ಮಾವೋವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ನವ್ಲಾಖಾ ಮುಂಬೈನಲ್ಲಿ ಗೃಹಬಂಧನದಲ್ಲಿದ್ದಾರೆ. ಮುಂಬೈನಿಂದ ತನ್ನ ಗೃಹಬಂಧನವನ್ನು ದಿಲ್ಲಿಗೆ ಸ್ಥಳಾಂತರಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು.

ಕಳೆದ ವರ್ಷ ನವೆಂಬರ್ 10 ರಂದು, 70 ವರ್ಷ ವಯಸ್ಸಿನ ಅವರ ಆರೋಗ್ಯ ಹದಗೆಟ್ಟಿರುವ ಕಾರಣ ಗೃಹಬಂಧನದಲ್ಲಿ ಇರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ದಿಲ್ಲಿಗೆ ಸ್ಥಳಾಂತರಿಸುವಂತೆ ಕೋರಿ ಅವರು ಸಲ್ಲಿಸಿರುವ ಅರ್ಜಿ ಶುಕ್ರವಾರ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತು. ನವ್ಲಾಖಾ ಅವರ ಅರ್ಜಿಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧಿಸಿದ್ದರು.

ನವ್ಲಾಖಾ ಪರ ವಾದ ಮಂಡಿಸಿದ ಹಿರಿಯ ವಕೀಲ ನಿತ್ಯಾ ರಾಮಕೃಷ್ಣನ್, ನವ್ಲಾಖಾ ಅವರು ಮುಂಬೈನಲ್ಲಿ ಉಳಿದುಕೊಳ್ಳಲು ಬೇರೆ ಸ್ಥಳವನ್ನು ಹುಡುಕುತ್ತಿದ್ದಾರೆ, ಹಾಗೂ ಅರ್ಜಿಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.

ಇದನ್ನು ಓದಿ:  ಅದಾನಿ ವಿವಾದ: ತಜ್ಞರ ಸಮಿತಿ ರಚನೆಗೆ ಕೇಂದ್ರ ಸರಕಾರದ ಸಲಹೆಯನ್ನು ಒಳಗೊಂಡ "ಮುಚ್ಚಿದ ಲಕೋಟೆ" ತಿರಸ್ಕರಿಸಿದ ಸುಪ್ರೀಂ

Similar News