ವಿಧಿ 370 ರದ್ದು ಪ್ರಶ್ನಿಸಿ ಅರ್ಜಿ: ಪಟ್ಟಿ ಮಾಡಲು ಪರಿಶೀಲಿಸುವುದಾಗಿ ಸುಪ್ರೀಂ ಭರವಸೆ

Update: 2023-02-17 15:29 GMT

 ಹೊಸದಿಲ್ಲಿ, ಫೆ. 17: ಜಮ್ಮು ಹಾಗೂ ಕಾಶ್ಮೀರವನ್ನು ವಿಶೇಷ ಸವಲತ್ತುಗಳಿಂದ ವಂಚಿಸಿದ ಹಾಗೂ 2019ರಲ್ಲಿ ರಾಜ್ಯವನ್ನು ವಿಭಾಗಿಸಲು ಕಾರಣವಾದ ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪಟ್ಟಿ ಮಾಡುವ ಕುರಿತು ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ(D.Y. Chandrachuda) ಅವರು ಶುಕ್ರವಾರ ಮತ್ತೆ ಭರವಸೆ ನೀಡಿದ್ದಾರೆ.

ಪ್ರಕರಣವನ್ನು ಶೀಘ್ರ ಪಟ್ಟಿ ಮಾಡುವಂತೆ ದೂರುದಾರರು ಮೌಖಿಕವಾಗಿ ಉಲ್ಲೇಖಿಸಿದ್ದರು. ಕಳೆದ ವರ್ಷ ಡಿಸೆಂಬರ್ 14ರಂದು ಇದೇ ರೀತಿ ಉಲ್ಲೇಖಿಸಲಾಗಿತ್ತು. ‘‘ನಾನು ಪರಿಶೀಲನೆ ನಡೆಸುತ್ತೇನೆ ಹಾಗೂ ದಿನಾಂಕ ನೀಡುತ್ತೇನೆ’’ ಎಂದು ಸಿಜೆಐ ದೂರುದಾರರಿಗೆ ಭರವಸೆ ನೀಡಿದ್ದರು. ಡಿಸೆಂಬರ್ ಗಿಂತ ಮುನ್ನ ಈ ಪ್ರಕರಣವನ್ನು 2022 ಸೆಪ್ಟಂಬರ್ 23ರಂದು ಶೀಘ್ರ ಪಟ್ಟಿ ಮಾಡುವಂತೆ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಮುಂದೆ ಉಲ್ಲೇಖಿಸಲಾಗಿತು.

ಅವರು ಅಕ್ಟೋಬರ್ 10ರ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ವಿಧಿ 370ರ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಕಳೆದ ಎರಡು ವರ್ಷಗಳಿಂದ ವಿಚಾರಣೆಗೆ ಬಾಕಿ ಇದೆ. ಐವರು ಸದಸ್ಯರ ನ್ಯಾಯಪೀಠ ಈ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲು 2020 ಮಾರ್ಚ್ ನಲ್ಲಿ ನಿರಾಕರಿಸಿದ ಬಳಿಕ ವಿಚಾರಣೆ ನಡೆದಿಲ್ಲ. ಅನಂತರ ಈ ಪ್ರಕರಣವನ್ನು ಶೀಘ್ರ ವಿಚಾರಣೆ ನಡೆಸುವಂತೆ ಹಲವು ಬಾರಿ ಉಲ್ಲೇಖಿಸಲಾಗಿತ್ತು.

Similar News