ಏಕನಾಥ ಶಿಂದೆ ಬಣಕ್ಕೆ ಶಿವಸೇನೆ ಹೆಸರು,ಚಿಹ್ನೆ: ಸುಪ್ರೀಂಕೋರ್ಟ್ ಮೊರೆ ಹೋದ ಉದ್ಧವ್ ಠಾಕ್ರೆ

Update: 2023-02-18 05:12 GMT

ಮುಂಬೈ/ಹೊಸದಿಲ್ಲಿ: ಏಕನಾಥ್ ಶಿಂಧೆ ಪಾಳಯಕ್ಕೆ ಶಿವಸೇನೆ ಹೆಸರು ಹಾಗೂ  ಚಿಹ್ನೆಯನ್ನು ಹಂಚಿಕೆ ಮಾಡುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray) ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಸಮಿತಿಯು ಶುಕ್ರವಾರ ಶಿವಸೇನೆ  ಪಕ್ಷದ ಹೆಸರು ಹಾಗೂ  ಬಿಲ್ಲು-ಬಾಣದ ಚಿಹ್ನೆಯ ಮೇಲಿನ ಹಕ್ಕನ್ನು  ಏಕನಾಥ್ ಶಿಂದೆ ಬಣಕ್ಕೆ ನೀಡಿತ್ತು. ಈ ನಿರ್ಧಾರವು ಉದ್ಧವ್ ಠಾಕ್ರೆ ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು.

ಶಿಂದೆ ಬಣ ಶಿವಸೇನೆಯಿಂದ ಬೇರ್ಟಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದೆ. ಸದ್ಯ ಶಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.

ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷದ ಮೇಲಿನ ಹಿಡಿತವನ್ನು ಕಳೆದುಕೊಂಡ ನಂತರ, ಚುನಾವಣಾ ಆಯೋಗದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ  ಶುಕ್ರವಾರ  ಹೇಳಿದ್ದ ಉದ್ದವ್ ಠಾಕ್ರೆ, ಚುನಾವಣಾ ಆಯೋಗದ ನಿರ್ಧಾರ  "ಪ್ರಜಾಪ್ರಭುತ್ವದ ಕೊಲೆ" ಹಾಗೂ  "ಕಳ್ಳತನ" ಎಂದು ಕರೆದರು.  ತಮ್ಮ ಪ್ರತಿಸ್ಪರ್ಧಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ "ಬದಲಾಗದ ದೇಶದ್ರೋಹಿ" ಎಂದು ದೂಷಿಸಿದರು.

ಉದ್ದವ್ ಠಾಕ್ರೆ ಅವರು ಶನಿವಾರ  ತಮ್ಮ ನಿವಾಸ 'ಮಾತೋಶ್ರೀ'ಯಲ್ಲಿ ತಮ್ಮ ಪಕ್ಷದ ಮುಖಂಡರು ಹಾಗೂ  ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ.

Similar News