ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಗುವಾಹಟಿ ಪೊಲೀಸರು

Update: 2023-02-18 13:40 GMT

ಗುವಾಹಟಿ, ಫೆ. 18: ತನಿಖೆಯ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನಲಾದ ಕೊಲೆ ಆರೋಪಿಯೊಬ್ಬನನ್ನು ಅಸ್ಸಾಮ್ ಪೊಲೀಸರು ಶುಕ್ರವಾರ ಗುಂಡು ಹಾರಿಸಿ ಕೊಂದಿದ್ದಾರೆ.

ವ್ಯಕ್ತಿಯೊಬ್ಬರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿ 33 ವರ್ಷದ ಶಾ ಆಲಮ್ ತಾಲೂಕ್ದಾರ್‌ನನ್ನು ಪೊಲೀಸರು ಕಳೆದ ವಾರ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಆತನನ್ನು ಗುವಾಹಟಿಯ ಬತಾಹ್ಗುಳಿ ಪ್ರದೇಶಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಆಗ ತಾಲೂಕ್ದಾರ್ ತನ್ನನ್ನು ಹಿಡಿದುಕೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ಕಾಡಿನತ್ತ ಓಡಿದನು ಎಂದು ಉಪ ಪೊಲೀಸ್ ಕಮಿಶನರ್ ದಿಗಂತ್ ಕುಮಾರ್ ಚೌಧರಿ ಹೇಳಿದರು. ನವೆಂಬರ್‌ನಲ್ಲಿ, ಹಾಲು ವಿತರಕ ರಂಜಿತ್ ಬೋರಾ ಎಂಬವರನ್ನು ಕೊಂದ ಆರೋಪದಲ್ಲಿ ತಾಲೂಕ್ದಾರ್ ಮತ್ತು ಇತರ ನಾಲ್ವರನ್ನು ಪೊಲೀಸರು ಕಳೆದ ವಾರ ಬಂಧಿಸಿದ್ದರು.

► ಹಿಮಂತ ಶರ್ಮ ಮುಖ್ಯಮಂತ್ರಿಯಾದ ಬಳಿಕ ಹೆಚ್ಚಿದ ಎನ್‌ಕೌಂಟರ್

2021 ಮೇ ತಿಂಗಳಲ್ಲಿ ಹಿಮಂತ ಬಿಸ್ವ ಶರ್ಮ ಅಸ್ಸಾಮ್ ಮುಖ್ಯಮಂತ್ರಿಯಾದ ಬಳಿಕ, ರಾಜ್ಯದಲ್ಲಿ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ 2021 ಮೇ ಮತ್ತು 2022 ಆಗಸ್ಟ್ ತಿಂಗಳ ನಡುವಿನ ಅವಧಿಯಲ್ಲಿ ಇಂಥ 171 ಪ್ರಕರಣಗಳು ನಡೆದಿವೆ ಎಂದು ಅಸ್ಸಾಮ್ ಸರಕಾರವು ಗೌಹಾಟಿ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ 56 ಮಂದಿ ಮೃತಪಟ್ಟಿದ್ದಾರೆ ಮತ್ತು 145 ಮಂದಿ ಗಾಯಗೊಂಡಿದ್ದಾರೆ ಎಂದು ಅಫಿದಾವಿತ್ ಹೇಳಿದೆ.

ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ರಾಜ್ಯದ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

Similar News