×
Ad

ಫ್ಲೋರಿಡಾ: ಅಜ್ಜಿಗೆ ಗುಂಡಿಕ್ಕಿದ 6 ವರ್ಷದ ಮೊಮ್ಮಗಳು

Update: 2023-02-18 21:38 IST

ನ್ಯೂಯಾರ್ಕ್, ಫೆ.18: ಚಲಿಸುತ್ತಿದ್ದ ಕಾರಿನ ಹಿಂದಿನ ಸೀಟಿನಲ್ಲಿದ್ದ 6 ವರ್ಷದ ಬಾಲಕಿ ತನ್ನ ಅಜ್ಜಿಯ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಬಾಲಕಿಯ ಅಜ್ಜಿ, 57 ವರ್ಷದ ಮಹಿಳೆ ಕಾರು ಚಲಾಯಿಸುತ್ತಿದ್ದಳು. ಆಕೆ ತನ್ನ ಗನ್ ಅನ್ನು ಕಾರಿನ ಹಿಂದಿನ ಸೀಟಿನಲ್ಲಿ ಇರಿಸಿದ್ದಳು. ಹಿಂದಿನ ಸೀಟಿನಲ್ಲಿದ್ದ 6 ವರ್ಷದ ಮೊಮ್ಮಗಳು, ಗನ್ ಅನ್ನು ಅಜ್ಜಿಗೆ ಗುರಿಹಿಡಿದು ಟ್ರಿಗರ್ ಅನ್ನು ಕುತೂಹಲದಿಂದ ಒತ್ತಿದಾಗ ಗುಂಡು ಹಾರಿ ಮಹಿಳೆಯ ಬೆನ್ನಿನ ಕೆಳಭಾಗಕ್ಕೆ ಬಡಿದಿದೆ. ತೀವ್ರ ಗಾಯಗೊಂಡಿದ್ದರೂ ಮಹಿಳೆ ಮನೆಯವರೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿ ಬಳಿಕ ತುರ್ತುಸೇವೆ ವಿಭಾಗಕ್ಕೆ ಕರೆ ಮಾಡಿದ್ದು ಆಕೆಯನ್ನು ತಕ್ಷಣ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಿಳೆಯ ಪ್ರಾಣಕ್ಕೆ ಅಪಾಯವಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿದೆ.

ಇದೊಂದು ಆಕಸ್ಮಿಕ ಘಟನೆಯಾಗಿದ್ದು ಮಕ್ಕಳ ಕೈಗೆ ಬಂದೂಕು ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ  ನಿದರ್ಶನವಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಟಾಡ್ ಗ್ಯಾರಿಸನ್ ಹೇಳಿದ್ದಾರೆ.

Similar News