ಎಲ್ಲೂರು ಗ್ರಾಮದ ಒಂದಿಂಚು ಜಾಗವನ್ನು ಬಿಟ್ಟುಕೊಡಲ್ಲ: ಗ್ರಾಪಂ ಅಧ್ಯಕ್ಷ ಜಯಂತ್‌ ಕುಮಾರ್ ಹೇಳಿಕೆ

Update: 2023-02-18 16:21 GMT

ಪಡುಬಿದ್ರೆ: ಕಾಪು ತಾಲೂಕು ಎಲ್ಲೂರು ಗ್ರಾಮದಲ್ಲಿ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೋರೇಷನ್ ಲಿ. ಉದ್ದೇಶಿತ ಹೈಟೆನ್ಶನ್ ವಯರ್‌ನ್ನು ಟವರ್ ಮೂಲಕ ಕೃಷಿ ಭೂಮಿಯಲ್ಲಿ ತೆಗೆದುಕೊಂಡು ಹೋಗುವ ವಿರುದ್ಧ ಅನುರಾಧ ಮತ್ತು ಇತರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್‌ಅರ್ಜಿ ಸಲ್ಲಿಸಿದ್ದು, ವಿಚಾರಣೆಯ ಬಳಿಕ ನ್ಯಾಯಾಧೀಶರು ಕೃಷಿ ಭೂಮಿಯ ಮೂಲಕ ತಂತಿ ಎಳೆಯದಂತೆ, ಟವರ್ ಹಾಕದಂತೆ ತಡೆಯಾಜ್ಞೆ ನೀಡಿದ್ದಾರೆ ಎಂದು ಎಲ್ಲೂರು ಗ್ರಾಪಂ ಅಧ್ಯಕ್ಷ ಜಯಂತಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ತಡೆಯಾಜ್ಞೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೂರು ಗ್ರಾಮ ಪಂಚಾಯತ್  ಈ ಯೋಜನೆಯ ವಿರುದ್ಧ ನಿರ್ಣಯ ಮಾಡಿದ್ದು, ಈ ಯೋಜನೆಯಿಂದ ಜನಸಾಮಾನ್ಯರಿಗೆ ಮತ್ತು ಕೃಷಿ ಭೂಮಿಗೆ ತುಂಬಾ ತೊಂದರೆ ಇದೆ ಎಂದು ಜಿಲ್ಲಾಧಿಕಾರಿಯವರಿಗೆ ಅನೇಕ ಬಾರಿ ಮನವಿ ಮಾಡಿದ್ದೆವು ಎಂದು ಹೇಳಿದ್ದಾರೆ. 

ಅನುರಾಧ ಹಾಗೂ ಇತರರು ಹಾಕಿದ ರಿಟ್‌ಗೆ ಪೂರಕವಾಗಿ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ನಾವು ಅರ್ಜಿದಾರರಿಗೆ ಮತ್ತು ಉಚ್ಚ ನ್ಯಾಯಾಲಯಕ್ಕೆ ಒದಗಿಸಿದ್ದು, ಯೋಜನೆ ಎಲ್ಲೂರು ಗ್ರಾಮಕ್ಕೆ ಬರದಂತೆ ಇನ್ನು ತಡೆಯು ವುದಾಗಿ, ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಲ್ಲೂರು ಗ್ರಾಪಂ ಅಧ್ಯಕ್ಷ ಜಯಂತ್‌ಕುಮಾರ್ ಹೇಳಿದ್ದಾರೆ. 

ಮುಂಬರುವ ದಿನಗಳಲ್ಲಿ ಕಂಪೆನಿಯ ವಿರುದ್ಧ ಇನ್ನೂ ಹೆಚ್ಚಿನ ದಾವೆಯನ್ನು ನ್ಯಾಯಾಲಯದಲ್ಲಿ ಹೂಡುವುದಾಗಿ ತಿಳಿಸಿದ್ದಾರೆ. ಉಚ್ಚ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ನ್ಯಾಯವಾದಿ ಸುದೇಶ್‌ಕುಮಾರ್ ಆಚಾರ್ಯ ವಾದಿಸಿದ್ದರು. 

Similar News