ಶಿವಸೇನೆ ಪಕ್ಷದ ಹೆಸರು ,ಅದರ ಚಿಹ್ನೆ ಖರೀದಿಸಲು ಇದುವರೆಗೆ 2 ಸಾವಿರ ಕೋ. ರೂ. ಡೀಲ್ ಆಗಿದೆ: ಸಂಜಯ್ ರಾವುತ್

Update: 2023-02-19 08:12 GMT

ಮುಂಬೈ: ಶಿವಸೇನೆ ಪಕ್ಷದ ಹೆಸರು ಹಾಗೂ  ಅದರ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಖರೀದಿಸಲು ಇಲ್ಲಿಯವರೆಗೆ ''2000 ಕೋಟಿ ರೂ.ಗಳ ಒಪ್ಪಂದ" ನಡೆದಿದೆ ಎಂದು ಶಿವಸೇನೆ (ಉದ್ಧವ್ ಬಾಳಾ ಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್(Sanjay Raut ) ಅವರು ರವಿವಾರ ಆರೋಪಿಸಿದ್ದಾರೆ.

ಆದಾಗ್ಯೂ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣದ ಶಾಸಕ ಸದಾ ಸರ್ವಾಂಕರ್ ಅವರು ಈ ಆರೋಪವನ್ನು ತಳ್ಳಿಹಾಕಿದರು.

 2,000 ಕೋಟಿ ರೂ.  ಎಂಬುದು ಪ್ರಾಥಮಿಕ ಅಂಕಿ ಅಂಶವಾಗಿದೆ ಹಾಗೂ  ಇದು 100 ಪ್ರತಿಶತ ಸತ್ಯ ಎಂದು ಟ್ವೀಟ್‌ನಲ್ಲಿ ರಾವುತ್ ಹೇಳಿದ್ದಾರೆ.

ಆಡಳಿತ ಪಕ್ಷಕ್ಕೆ ಹತ್ತಿರವಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ರಾವುತ್  ಸುದ್ದಿಗಾರರಿಗೆ ತಿಳಿಸಿದರು.

ತನ್ನ ಆರೋಪಕ್ಕೆ  ಸೂಕ್ತ ದಾಖಲೆಯಿದೆ. ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ರಾವುತ್ ಹೇಳಿದರು.

“ಶಿವಸೇನೆ ಹೆಸರು ಹಾಗೂ  ಅದರ ಚಿಹ್ನೆಯನ್ನು ಪಡೆಯಲು  2,000 ಕೋಟಿ ರೂ.  ಡೀಲ್ ನಡೆದಿರುವ ಬಗ್ಗೆ ನನಗೆ ವಿಶ್ವಾಸಾರ್ಹ ಮಾಹಿತಿ ಇದೆ. ಇದು ಪ್ರಾಥಮಿಕ ಅಂಕಿ ಅಂಶವಾಗಿದೆ. ಇದು 100 ಪ್ರತಿಶತ ಸತ್ಯವಾಗಿದೆ. ಶೀಘ್ರದಲ್ಲೇ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ. ದೇಶದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ನಡೆದಿಲ್ಲ " ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಆಯೋಗವು ಶುಕ್ರವಾರ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿದೆ. ಚುನಾವಣಾ ಚಿಹ್ನೆಯಾದ  'ಬಿಲ್ಲು ಮತ್ತು ಬಾಣವನ್ನ ಶಿಂದೆ ಬಣಕ್ಕೆ ನೀಡುವಂತೆ ಆದೇಶಿಸಿದೆ.

Similar News