×
Ad

ಅಪ್ರಾಪ್ತ ಬಾಲಕಿಗೆ "ಬಾ, ಬಾ" ಎನ್ನುವುದು ಲೈಂಗಿಕ ಕಿರುಕುಳ: ಮುಂಬೈ ಕೋರ್ಟ್

Update: 2023-02-19 13:18 IST

ಮುಂಬೈ: ಯುವತಿಯು ಸ್ಪಷ್ಟವಾಗಿ ನಿರಾಸಕ್ತಿ ವ್ಯಕ್ತಪಡಿಸಿದರೂ, ಆಕೆಯನ್ನು ಹಿಂಬಾಲಿಸಿ, ಪದೇ ಪದೇ 'ಆಜಾ, ಆಜಾ' (ಬಾ, ಬಾ) ಎನ್ನುವುದು ಲೈಂಗಿಕ ಕಿರುಕುಳ ನೀಡಿದಂತೆ ಎಂದು ಅಭಿಪ್ರಾಯಪಟ್ಟಿರುವ ದಿಂಡೋಷಿಯ ಸೆಷನ್ಸ್ ಕೋರ್ಟ್, ಪೋಕ್ಸೊ ಕಾಯ್ದೆಯಡಿ ಈ ಕೃತ್ಯವೆಸಗಿದ 32 ವರ್ಷದ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ಘೋಷಿಸಿದೆ ಎಂದು freepressjournal.in ವರದಿ ಮಾಡಿದೆ.

ಈ ಘಟನೆಯು 2015ರಲ್ಲಿ ಜರುಗಿದ್ದು, ಆಗ ಸಂತ್ರಸ್ತ ಯುವತಿಯು ಹತ್ತನೆ ತರಗತಿ ಓದುತ್ತಿದ್ದ 15 ವರ್ಷದ ಬಾಲಕಿಯಾಗಿದ್ದಳು. ನ್ಯಾಯಾಲಯದೆದುರು ಹಾಜರಾದ ಆ ಯುವತಿಯು, ನಾನು ಫ್ರೆಂಚ್ ಭಾಷಾ ತರಗತಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಆಗ 20 ವರ್ಷದ ಆಸುಪಾಸು ವಯೋಮಾನದವನಾಗಿದ್ದ ಆರೋಪಿಯು ತನ್ನನ್ನು ಬೈಸಿಕಲ್‌ನಲ್ಲಿ ಹಿಂಬಾಲಿಸಿ, ಪದೇ ಪದೇ 'ಆಜಾ, ಆಜಾ' ಎಂದು ಕರೆಯುತ್ತಿದ್ದ" ಎಂದು ಸಾಕ್ಷ್ಯ ನುಡಿದಳು.

ತಾನು ಈಗಾಗಲೇ ವಿವಾಹಿತನಾಗಿದ್ದು, ನನಗೆ ಪತ್ನಿ ಹಾಗೂ ಮೂರು ವರ್ಷದ ಮಗು ಇರುವುದಲ್ಲದೆ ನಾನು ಬಡವನಾಗಿರುವುದರಿಂದ ತನಗೆ ಶಿಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಆರೋಪಿಯು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಆತನ ಮನವಿಯನ್ನು ಪುರಸ್ಕರಿಸಿದ ಸೆಷನ್ಸ್ ನ್ಯಾಯಾಧೀಶ ಎ.ಝೆಡ್. ಖಾನ್, ಆತನ ಬಂಧನವಾದ ಸೆಪ್ಟೆಂಬರ್ 2015ರಿಂದ ಜಾಮೀನು ಪಡೆದ ಮಾರ್ಚ್, 2016ರ ನಡುವೆ ಆತ ವಿಚಾರಣಾಧೀನ ಕೈದಿಯಾಗಿ ಕಳೆದ ಅವಧಿಯನ್ನೇ ಶಿಕ್ಷೆ ಎಂದು ಆದೇಶ ನೀಡಿದರು.

Similar News