ಮಧ್ಯಪ್ರದೇಶ: ಶಿವರಾತ್ರಿ ಸಂದರ್ಭದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ನಿರಾಕರಣೆ, ಘರ್ಷಣೆಯಲ್ಲಿ 14 ಮಂದಿಗೆ ಗಾಯ
ಭೋಪಾಲ್: ನೈರುತ್ಯ ಮಧ್ಯಪ್ರದೇಶದಲ್ಲಿ ಶಿವರಾತ್ರಿ ಹಬ್ಬದಂದು ಪ್ರಾರ್ಥನೆ ಸಲ್ಲಿಸುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಕನಿಷ್ಠ 14 ಜನರು ಗಾಯಗೊಂಡಿದ್ದಾರೆ.
ಖಾರ್ಗೋನ್ ಜಿಲ್ಲೆಯ ದೇವಸ್ಥಾನಕ್ಕೆ ಪ್ರವೇಶಿಸದಂತೆ "ಮೇಲ್ಜಾತಿ" ಎಂದು ಕರೆಯಲ್ಪಡುವ ಕೆಲವರು ತಮ್ಮನ್ನು ತಡೆದಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ.
ಸನವಾಡ್ ಪ್ರದೇಶದ ಛಪ್ರಾ ಗ್ರಾಮದಲ್ಲಿ ಇತರ ಮೂರು ಸಮುದಾಯಗಳ ಜನರು ನಿರ್ಮಿಸಿದ ಶಿವ ದೇವಾಲಯದಲ್ಲಿ ದಲಿತರು ಪ್ರಾರ್ಥನೆ ಸಲ್ಲಿಸುವ ಬಗ್ಗೆ ನಡೆದ ವಾಗ್ವಾದ ಘರ್ಷಣೆಗೆ ಕಾರಣವಾಯಿತು, ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ಭೋಪಾಲ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಎರಡೂ ಕಡೆಯಿಂದ ಕಲ್ಲು ತೂರಾಟ ವರದಿಯಾಗಿದೆ.
"ಎರಡೂ ಕಡೆಯಿಂದ ಭಾರೀ ಕಲ್ಲು ತೂರಾಟ ನಡೆದಿದೆ. ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ತಿಳಿಸಿದ್ದಾರೆ.
17 ಶಂಕಿತರು ಹಾಗೂ 25 ಅಪರಿಚಿತರ ವಿರುದ್ಧ ಗಲಭೆ ಹಾಗೂ ಇತರ ಆರೋಪಗಳಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಕಾನೂನು ಅಡಿಯಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.