ಸೈಬರ್ ವಂಚಕರು ಟೋಪಿ ಹಾಕಿದ್ದ ಲಕ್ಷಾಂತರ ರೂ. ವಾಪಸ್ ಪಡೆಯುವಲ್ಲಿ ಯಶಸ್ವಿಯಾದ ರೈತ
ಹೊಸದಿಲ್ಲಿ: ಇತ್ತೀಚಿಗೆ ಸೈಬರ್ ವಂಚನೆಯಿಂದಾಗಿ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದ ರಾಜಸ್ಥಾನದ ಶ್ರೀಗಂಗಾನಗರ ನಿವಾಸಿಯಾಗಿರುವ ರೈತ ಪವನಕುಮಾರ ಸೋನಿ (55) ಕೊನೆಗೂ ತನ್ನ ಹಣವನ್ನು ವಾಪಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೋನಿಯವರ ಪುತ್ರ ಹರ್ಷವರ್ಧನ್ (26) ದಿಲ್ಲಿಯ ದ್ವಾರಕಾದಲ್ಲಿ ವಾಸವಿದ್ದು,ಅವರ ಮೊಬೈಲ್ ಫೋನ್ ಸಂಖ್ಯೆಯು ಎಸ್ಬಿಐನ ಶ್ರೀಗಂಗಾನಗರ ಶಾಖೆಯಲ್ಲಿನ ತಂದೆಯ ಖಾತೆಯೊಂದಿಗೆ ನೋಂದಣಿಯಾಗಿದೆ. ಜ.7ರಂದು ವರ್ಧನ್ ಮೊಬೈಲ್ ಗೆ ‘ನಿಮ್ಮ ಖಾತೆಯನ್ನು ತಡೆಹಿಡಿಯಲಾಗಿದೆ, ದಯವಿಟ್ಟು ನಿಮ್ಮ ಕೆವೈಸಿಯನ್ನು ಅಪ್ಡೇಟ್ ಮಾಡಿ’ ಎಂಬ ಸಂದೇಶವು ಬಂದಿತ್ತು. ವರ್ಧನ್ ತನ್ನ ಮೊಬೈಲ್ ನಲ್ಲಿ ಈಗಾಗಲೇ ಎಸ್ಬಿಐನ ಯುನೋ ಆ್ಯಪ್ ಹೊಂದಿದ್ದರು, ಆದರೆ ಸಂದೇಶದಲ್ಲಿಯ ಲಿಂಕ್ ಅನ್ನು ಕ್ಲಿಕ್ಕಿಸಿದ ತಕ್ಷಣ ಡುಪ್ಲಿಕೇಟ್ ಆ್ಯಪ್ ಅವರ ಮೊಬೈಲ್ ನಲ್ಲಿ ಡೌನ್ಲೋಡ್ ಆಗಿತ್ತು. ಈ ಹೊಸ ಆ್ಯಪ್ ನಲ್ಲಿ ತನ್ನ ಕೆವೈಸಿಯನ್ನು ಅಪ್ಡೇಟ್ ಮಾಡಬೇಕು ಎಂದು ಭಾವಿಸಿದ್ದ ಅವರು ತನ್ನ ಯೂಸರ್ ಐಡಿ ಮತ್ತು ಪಾಸವರ್ಡ್ ನಮೂದಿಸಿದ್ದರು. ಇದರ ಬೆನ್ನಲ್ಲೇ ಅವರ ಮೊಬೈಲ್ ಗೆ ಬ್ಯಾಂಕ್ ನಿಂದ ಸಂದೇಶಗಳು ಬರತೊಡಗಿದ್ದವು ಮತ್ತು ಕೇವಲ ಏಳು ನಿಮಿಷಗಳಲ್ಲಿ ಅವರ ತಂದೆಯ ಬ್ಯಾಂಕ್ ಖಾತೆಯಿಂದ ಬೇರೆ ಬೇರೆ ವಹಿವಾಟುಗಳಲ್ಲಿ 8,03,099 ರೂ.ಗಳು ಮಾಯವಾಗಿದ್ದವು. ಈ ಹಣ ಸೋನಿ ಕೃಷಿ ಉದ್ದೇಶಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ನಡಿ ಪಡೆದುಕೊಂಡಿದ್ದ ಸಾಲವಾಗಿತ್ತು.
ವರ್ಧನ್ ಗಂಗಾನಗರದಲ್ಲಿಯ ತಂದೆಗೆ ಕರೆ ಮಾಡಿದ್ದು, ಅವರು ಬ್ಯಾಂಕ್ ಮ್ಯಾನೇಜರ್ ಗೆ ಮಾಹಿತಿ ನೀಡಲು ತಕ್ಷಣ ಧಾವಿಸಿದ್ದರು. ಇತ್ತ ವರ್ಧನ್ ದ್ವಾರಕಾದಲ್ಲಿಯ ಜಿಲ್ಲಾ ಸೈಬರ್ ಘಟಕಕ್ಕೆ ತೆರಳಿದ್ದು, ಆನ್ಲೈನ್ ನಲ್ಲಿ ದೂರು ದಾಖಲಿಸುವಂತೆ ಮತ್ತು ಯಾವುದೇ ಕೆಲಸದ ದಿನ ಕಚೇರಿಗೆ ಭೇಟಿ ನೀಡುವಂತೆ ಅವರಿಗೆ ಅಲ್ಲಿ ತಿಳಿಸಲಾಗಿತ್ತು.
ಅತ್ತ ಸೋನಿಯವರ ಮನವಿಯ ಮೇರೆಗೆ ಚುರುಕಾಗಿ ಕಾರ್ಯ ನಿರ್ವಹಿಸಿದ ಬ್ಯಾಂಕ್ ಮ್ಯಾನೇಜರ್ ಸ್ಥಳೀಯ ಸೈಬರ್ ಸೆಲ್ಗೆ ಕರೆ ಮಾಡಿದ್ದರು. ಹಣವು ವರ್ಗಾವಣೆಯಾಗಿದ್ದ ಖಾತೆಗಳಿದ್ದ ಹಣಕಾಸು ಸಂಸ್ಥೆಗಳಿಗೆ ಇ-ಮೇಲ್ಗಳನ್ನೂ ಕಳುಹಿಸಿ ಖಾತೆಗಳಲ್ಲಿಯ ಹಣವನ್ನು ತಡೆಹಿಡಿಯುವಂತೆ ಸೂಚಿಸಿದ್ದರು.
ಸೋನಿಯವರ ಖಾತೆಯಿಂದ ಪೇಯು (PayU)ಗೆ ಐದು ಲಕ್ಷ ಮತ್ತು 1.24 ಲಕ್ಷ ರೂ., ಸಿಸಿಅವೆನ್ಯೂಗೆ 1,54,899 ರೂ .ಹಾಗೂ ಉಳಿದ 25,000 ರೂ. ಎಕ್ಸಿಸ್ ಬ್ಯಾಂಕ್ ಗೆ ವರ್ಗಾವಣೆಯಾಗಿದ್ದವು. ಪೇಯು ಮತ್ತು ಸಿಸಿ ಅವೆನ್ಯೂ ಡಿಜಿಟಲ್ ಪೇಮೆಂಟ್ ಕಂಪನಿಗಳಾಗಿದ್ದು, ಗ್ರಾಹಕರು ಮತ್ತು ವ್ಯವಹಾರ ಮಳಿಗೆಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತವೆ.
ಬ್ಯಾಂಕ್ ಮ್ಯಾನೇಜರ್ ಕಳುಹಿಸಿದ್ದ ಇ-ಮೇಲ್ ಗೆ ಉತ್ತರಿಸಿದ್ದ ಪೇಯು ಹಣವನ್ನು ತಡೆಹಿಡಿದಿತ್ತು. ಎರಡು ದಿನಗಳಲ್ಲಿ ಸೈಬರ್ ಅಪರಾಧ ಇಲಾಖೆಯಿಂದ ತನಗೆ ಇ-ಮೇಲ್ ಬರದಿದ್ದರೆ ತಾನು ತನ್ನ ಖಾತೆದಾರನಿಗೆ ಹಣವನ್ನು ಬಿಡುಗಡೆ ಮಾಡುವುದಾಗಿಯೂ ಅದು ತಿಳಿಸಿತ್ತು.
ತಾನು ಜ.7ರಂದು ಸೈಬರ್ ಅಧಿಕಾರಿಗಳಿಗೆ ಎಲ್ಲ ಮಾಹಿತಿಗಳನ್ನು ಒದಗಿಸಿದ್ದೆ ಎಂದು ಸಿಸಿಅವೆನ್ಯೂ ಹೇಳಿದೆ.
ಅತ್ತ ಆನ್ಲೈನ್ ದೂರನ್ನು ಸಲ್ಲಿಸಿದ್ದ ವರ್ಧನ್ ಎರಡು ದಿನಗಳ ಬಳಿಕ ಎಫ್ಐಆರ್ ದಾಖಲಿಸಲು ಠಾಣೆಗೆ ತೆರಳಿದ್ದರು, ಆದರೆ ಎಫ್ಐಆರ್ ದಾಖಲಿಸಲು ಠಾಣಾಧಿಕಾರಿ ನಿರಾಕರಿಸಿದ್ದರು ಎಂದು ಆರೋಪಿಸಲಾಗಿದೆ.
ವರ್ಧನ್ ಹೆಚ್ಚುವರಿ ಡಿಸಿಪಿಯನ್ನು ಭೇಟಿಯಾದ ಬಳಿಕವಷ್ಟೇ ಜ.10ರಂದು ಠಾಣಾಧಿಕಾರಿ ಎಫ್ಐಆರ್ ದಾಖಲಿಸಿದ್ದರು, ಆಗ ವಂಚನೆ ನಡೆದು ಮೂರು ದಿನಗಳು ಕಳೆದುಹೋಗಿದ್ದವು.
ತನ್ನ ತಂದೆಯ ಖಾತೆಗೆ ಹಣವನ್ನು ಮರಳಿಸುವಂತೆ ಪೇಯುಗೆ ಸೂಚಿಸಿ ಇ-ಮೇಲ್ ಕಳುಹಿಸುವಂತೆ ವರ್ಧನ್ ದ್ವಾರಕಾ ಸೈಬರ್ ಸೆಲ್ ಅನ್ನು ಕೋರಿದ್ದರು. ಆದರೆ ಪೊಲೀಸರು ಪೊಳ್ಳು ಭರವಸೆಗಳನ್ನು ನೀಡಿದ್ದರು ಮತ್ತು ಏನನ್ನೂ ಮಾಡಲಿಲ್ಲ ಎಂದು ವರ್ಧನ್ ಹೇಳಿದ್ದಾರೆ.
ಬಳಿಕ ಸೋನಿ ಗಂಗಾನಗರದ ಸೈಬರ್ ಸೆಲ್ ಅನ್ನು ಸಂಪರ್ಕಿಸಿದ್ದರು. ಅದು ಪೇಯುಗೆ ಇ-ಮೇಲ್ ರವಾನಿಸಿತ್ತು ಮತ್ತು ಸೋನಿಯವರ ಖಾತೆಯಲ್ಲಿ 6,24,000 ರೂ.ಗಳು ಮರುಜಮೆಯಾಗಿದ್ದವು.
ಆದರೆ ಹಟ ಬಿಟದ ಸೋನಿ ಎಕ್ಸಿಸ್ ಬ್ಯಾಂಕ್ ಮತ್ತು ಸಿಸಿ ಅವೆನ್ಯೂಗೆ ಹೋಗಿದ್ದ ಹಣದ ಜಾಡನ್ನು ಪತ್ತೆ ಹಚ್ಚಲು ಡಿಜಿಟಲ್ ಹಣಕಾಸು ವೃತ್ತಿಪರರ ನೆರವು ಪಡೆದಿದ್ದರು.
ಸಿಸಿಅವೆನ್ಯೂಗೆ ವರ್ಗಾವಣೆಯಾಗಿದ್ದ 1,54,899 ರೂ.ಗಳ ಪೈಕಿ 1,20,000 ರೂ.ಗಳನ್ನು ವಂಚಕ ಕೋಲ್ಕತಾದ ಜಿಯೋ ಸ್ಟೋರ್ನಿಂದ ಖರೀದಿಗೆ ಬಳಸಿದ್ದ. ಅವರು ಕೋಲ್ಕತಾದ ಸಂಬಂಧಿತ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರಾದರೂ ತಮಗೆ ದಿಲ್ಲಿ ಪೊಲೀಸರಿಂದ ಲಿಖಿತ ಸೂಚನೆ ಬರುವವರೆಗೆ ತಾವು ಏನನ್ನೂ ಮಾಡುವುದಿಲ್ಲ ಎಂದು ಅವರಿಗೆ ತಿಳಿಸಲಾಗಿತ್ತು. ಸೋನಿ ಮತ್ತು ವರ್ಧನ್ ಎಕ್ಸಿಸ್ ಬ್ಯಾಂಕ್, ಸಿಸಿಅವೆನ್ಯು ಮತ್ತು ಕೋಲ್ಕತಾ ಪೊಲೀಸರಿಗೆ ಪತ್ರ ಬರೆಯುವಂತೆ ಹಲವಾರು ಬಾರಿ ದ್ವಾರಕಾದ ಸೈಬರ್ ಸೆಲ್ಗೆ ಕೋರಿಕೊಂಡ ಬಳಿಕ ಕೊನೆಗೂ ಜ.23ರಂದು ಅದು ಆ ಕೆಲಸ ಮಾಡಿತ್ತು, ಆದರೆ ಆ ವೇಳೆಗಾಗಲೇ ತುಂಬ ತಡವಾಗಿತ್ತು.
ಹಣದ ಜಾಡು ಹಿಡಿಯಲು ನನಗೆ ಸಾಧ್ಯವಾದಾಗ ಪೊಲೀಸರಿಗೇಕೆ ಸಾಧ್ಯವಾಗಲಿಲ್ಲ? ಅವರು ಅದನ್ನು ಕ್ಷಿಪ್ರವಾಗಿ ಮತ್ತು ಸುಲಭವಾಗಿ ಮಾಡಬಹುದಿತ್ತು ಎಂದು ಸೋನಿ ಹೇಳಿದ್ದಾರೆ.