×
Ad

ನಾವಿಲ್ಲದೆ ಪ್ರತಿಪಕ್ಷಗಳ ಒಗ್ಗಟ್ಟು ಸಾಧ್ಯವಿಲ್ಲ: ಕಾಂಗ್ರೆಸ್

Update: 2023-02-19 22:39 IST

ಹೊಸದಿಲ್ಲಿ: ತನ್ನ ಪಾಲ್ಗೊಳ್ಳುವಿಕೆ ಇಲ್ಲದೆ 2024ರ ಲೋಕಸಭಾ (Lok Sabha) ಚುನಾವಣೆಗಳಿಗೆ ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ರವಿವಾರ ಪ್ರತಿಪಾದಿಸಿದೆ.

2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ವಿರುದ್ಧ ಮೈತ್ರಿಕೂಟವನ್ನು ರೂಪಿಸಲು ವಿವಿಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ತನ್ನ ಪಾತ್ರದ ಬಗ್ಗೆ ಪಕ್ಷಕ್ಕೆ ಅರಿವಿದೆ ಎಂದು ಹೇಳಿದ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ (K. C. Venugopal) ಅವರು, ‘ಕಾಂಗ್ರೆಸ್ ಈಗಾಗಲೇ ಉಪಕ್ರಮವನ್ನು ಆರಂಭಿಸಿದೆ ಮತ್ತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ. ನಾವು ಖಂಡಿತವಾಗಿಯೂ ಬಿಜೆಪಿಯ ವಿರುದ್ಧ ಅವುಗಳನ್ನು ಒಗ್ಗೂಡಿಸುತ್ತೇವೆ’ ಎಂದರು.

ಭಾರತ ಜೋಡೊ ಯಾತ್ರೆಯ ಸಂದರ್ಭದಲ್ಲಿ ಗಳಿಸಿರುವ ಹೊಸ ಉತ್ಸಾಹವನ್ನು ಸಂಯುಕ್ತ ರಂಗವೊಂದನ್ನು ರೂಪಿಸಲು ಬಳಸಿಕೊಳ್ಳುವಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಶನಿವಾರ ಕಾಂಗ್ರೆಸ್ಗೆ ಸಲಹೆ ನೀಡಿದ್ದರು. ಕಾಂಗ್ರೆಸ್ ತನ್ನ ಮಾತನ್ನು ಕೇಳಿದರೆ ಬಿಜೆಪಿಯ ಗಳಿಕೆ 100 ಸ್ಥಾನಗಳಿಗಿಂತ ಕೆಳಕ್ಕೆ ಕುಸಿಯಲಿದೆ ಎಂದೂ ಅವರು ಹೇಳಿದ್ದರು.

ಫೆ.24ರಿಂದ ರಾಯಪುರದಲ್ಲಿ ಆರಂಭವಾಗಲಿರುವ ಪಕ್ಷದ ಮೂರು ದಿನಗಳ ಪೂರ್ಣಾಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕುರಿತು ಹೆಚ್ಚಿನ ಚರ್ಚೆಗಳು ನಡೆಯಲಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh)ತಿಳಿಸಿದರು.

‘ಮೈತ್ರಿಯ ಪ್ರಯತ್ನವನ್ನು ನಾವು ಮುನ್ನಡೆಸಬೇಕು ಎಂದು ಯಾರೂ ನಮಗೆ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ,ಏಕೆಂದರೆ ಕಾಂಗ್ರೆಸ್ ಇಲ್ಲದೆ ಪ್ರತಿಪಕ್ಷಗಳ ಏಕತೆ ಯಶಸ್ವಿಯಾಗುವುದಿಲ್ಲ ’ಎಂದ ಅವರು,‘ಹೀಗಾಗಿ ನಾವು ನಿತೀಶ್ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಮತ್ತು ಈ ವಿಷಯವನ್ನು ಪೂರ್ಣಾಧಿವೇಶನದಲ್ಲಿ ಚರ್ಚಿಸಲಾಗುವುದು ’ಎಂದರು.

ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೊ ಯಾತ್ರೆ (Bharat Jodo Yatra)ಯ ಪ್ರಭಾವವನ್ನು ಒಪ್ಪಿಕೊಂಡಿದ್ದಾಗಿ ಅವರು ನಿತೀಶ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

Similar News