ಐಎಂಎಫ್ ಬಳಿ ನಮ್ಮ ಸಮಸ್ಯೆಗೆ ಪರಿಹಾರವಿಲ್ಲ: ಪಾಕ್ ಸಚಿವ

Update: 2023-02-19 17:44 GMT

ಇಸ್ಲಮಾಬಾದ್, ಫೆ.19: ನಮ್ಮ ಸಮಸ್ಯೆಗಳಿಗೆ ಪರಿಹಾರ ನಮ್ಮ ದೇಶದೊಳಗೇ ಇದೆ. ಪಾಕಿಸ್ತಾನದ ಸಮಸ್ಯೆಗಳಿಗೆ ಐಎಂಎಫ್ ಬಳಿ ಪರಿಹಾರವಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಪಾಕಿಸ್ತಾನವು ದಿವಾಳಿತನದ ಅಂಚಿನಲ್ಲಿದೆ ಅಥವಾ ಪಾಕಿಸ್ತಾನ ಡಿಫಾಲ್ಟರ್ ಪಟ್ಟಿಗೆ ಸೇರಲಿದೆ ಎಂಬ ಹೇಳಿಕೆ, ವರದಿಯನ್ನು ನೀವು ಗಮನಿಸಿರಬಹುದು. ಆದರೆ ಇದು ಈಗಾಗಲೇ ಸಂಭವಿಸಿದೆ. ನಾವು ದಿವಾಳಿಯಾದ ದೇಶದಲ್ಲಿದ್ದೇವೆ ಎಂದು ಆಸಿಫ್ ಹೇಳಿರುವುದಾಗಿ `ದಿ ಡಾನ್' ವರದಿ ಮಾಡಿದೆ. ಈಗ ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯು  ಕಳೆದ 70 ವರ್ಷದಿಂದ ಸಂವಿಧಾನ ಮತ್ತು ದೇಶದ ಕಾನೂನಿಗೆ ಕನಿಷ್ಟ ಗೌರವ ನೀಡಿರುವ ಪರಿಣಾಮವಾಗಿದೆ ಎಂದವರು  ಹೇಳಿದ್ದಾರೆ.

ಪಾಕಿಸ್ತಾನವು ಅತ್ಯಧಿಕ ಪ್ರಮಾಣದ ಹಣದುಬ್ಬರ ಹಾಗೂ ಕನಿಷ್ಟ ವಿದೇಶಿ ವಿನಿಮಯ ದಾಸ್ತಾನು ಹೊಂದಿದ್ದು ಅಗತ್ಯ ವಸ್ತುಗಳನ್ನು  ಕೇವಲ  15 ದಿನ ಆಮದು ಮಾಡಿಕೊಳ್ಳಲು ಇದು ಸಾಕಾಗುತ್ತದೆ ಎಂದು ಮೂಲಗಳು ಹೇಳಿವೆ. ಐಎಂಎಫ್ನಿಂದ ಸಿಗುವ ಸಾಲದ ನೆರವು ಮಾತ್ರ ದೇಶದ ಅರ್ಥವ್ಯವಸ್ಥೆಯನ್ನು ಮರಳಿ ಹಳಿಗೆ ತರಲು ಸಾಧ್ಯವಾಗದು. ಈಗ ನಮ್ಮ ಅರ್ಥವ್ಯವಸ್ಥೆಗೆ ಬೇಕಾಗಿರುವುದು  ನಿರಂತರ ಮತ್ತು ಉತ್ತಮ ಆರ್ಥಿಕ ನಿರ್ವಹಣೆ ಎಂದು ಹಿರಿಯ ಅರ್ಥಶಾಸ್ತ್ರಜ್ಞೆ ಕತ್ರೀನಾ  ಹೇಳಿದ್ದಾರೆ.

Similar News