ಜೈಲಿನಲ್ಲಿ ತಪಾಸಣೆ ವೇಳೆ ಮೊಬೈಲ್ ಫೋನ್ ಅನ್ನೇ ನುಂಗಿದ ಕೈದಿ !

Update: 2023-02-20 08:30 GMT

ಪಾಟ್ನಾ: ಜೈಲಿನಲ್ಲಿ ತಪಾಸಣೆ ವೇಳೆ ಅಧಿಕಾರಿಗೆ ಸಿಕ್ಕಿ ಬೀಳುವ ಭೀತಿಯಿಂದ ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದ ಕೈದಿಯೊಬ್ಬ ಮೊಬೈಲ್ ಫೋನ್ ಅನ್ನೇ ನುಂಗಿರುವ ಘಟನೆ ನಡೆದಿದೆ ಎಂದು ಸೋಮವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖೈಷರ್ ಅಲಿ ಎಂಬ ಕೈದಿ ಶನಿವಾರ ನಡೆದ ಬಂದೀಖಾನೆ ತಪಾಸಣೆಯ ಸಂದರ್ಭದಲ್ಲಿ ಮೊಬೈಲ್ ಫೋನ್ ನುಂಗಿದ್ದಾನೆ. ಆದರೆ, ಈ ವಿಷಯವು ರವಿವಾರ ಖೈಷರ್ ಅಲಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಬೆಳಕಿಗೆ ಬಂದಿದೆ.

ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗೋಪಾಲ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್, "ಘಟನೆಯ ಕುರಿತು ಕೈದಿಯು ಮಾಹಿತಿ ನೀಡಿ, ಸಂದರ್ಭವನ್ನು ವಿವರಿಸಿದ. ಕೂಡಲೇ ಆತನನ್ನು ಗೋಪಾಲ್‌ಗಂಜ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಕ್ಷಕಿರಣ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯ ಸಂದರ್ಭದಲ್ಲಿ ಕೈದಿಯ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಕಂಡು ಬಂದಿತು" ಎಂದು ತಿಳಿಸಿದ್ದಾರೆ.

"ಕೈದಿಯನ್ನು ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಆತನ ಹೊಟ್ಟೆಯ ಕ್ಷ ಕಿರಣ ಪರೀಕ್ಷೆ ನಡೆಸಲಾಯಿತು ಮತ್ತು ಪರೀಕ್ಷೆಯ ಸಂದರ್ಭದಲ್ಲಿ ಆತನ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಕಂಡು ಬಂದಿತು. ಇದನ್ನು ಕೂಲಂಕಷವಾಗಿ ಪರೀಕ್ಷಿಸಬೇಕಾದ ಅಗತ್ಯವಿದೆ" ಎಂದು ಆಸ್ಪತ್ರೆಯ ತುರ್ತು ಘಟಕದ ವೈದ್ಯ ಸಲಾಮ್ ಸಿದ್ದಿಕಿ ತಿಳಿಸಿದ್ದಾರೆ.

ಈ ಕುರಿತು ತನಿಖೆ ನಡೆಸಲು ಆಸ್ಪತ್ರೆಯು ವೈದ್ಯಕೀಯ ಮಂಡಳಿಯನ್ನು ರಚಿಸಿದ್ದು, ಕೈದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಿದೆ.

ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಅಡಿ ಆಲಿಯನ್ನು ಜನವರಿ 17, 2020ರಂದು ಗೋಪಾಲ್‌ಗಂಜ್ ಪೊಲೀಸರು ಬಂಧಿಸಿದ್ದರು. ಆತ ಕಳೆದ ಮೂರು ವರ್ಷದಿಂದ ಸೆರೆವಾಸ ಅನುಭವಿಸುತ್ತಿದ್ದಾನೆ.

Similar News