ದ್ವೇಷ ಭಾಷಣ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ 2021ರಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀಡಲಾದ ದ್ವೇಷದ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಮುಂದುವರಿದ ಹಂತದಲ್ಲಿದೆ ಎಂದು ದಿಲ್ಲಿ ಪೊಲೀಸರು ನೀಡಿದ ಮಾಹಿತಿಯನ್ನು ಇಂದು ಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಈ ಪ್ರಕರಣ ಕುರಿತಂತೆ ಚಾರ್ಜ್ ಶೀಟ್ ಸಲ್ಲಿಸುವಂತೆ ಸೂಚಿಸಿದೆ.
ಆರೋಪಿಗಳ ಧ್ವನಿ ಮಾದರಿಗಳ ಕುರಿತಾದ ಫೊರೆನ್ಸಿಕ್ ವರದಿಗಾಗಿ ಸದ್ಯ ಪೊಲೀಸರು ಕಾಯುತ್ತಿದ್ದಾರೆ ಎಂದು ದಿಲ್ಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠಕ್ಕೆ ತಿಳಿಸಿದರು.
ಈ ಪ್ರಕರಣ ಕುರಿತಾದ ಚಾರ್ಜ್ ಶೀಟ್ ಶೀಘ್ರ ಸಲ್ಲಿಸಲಾಗುವುದೆಂದೂ ಅವರು ತಿಳಿಸಿದರು.
ಈ ಕುರಿತು ಆದೇಶ ನೀಡಿದ ನ್ಯಾಯಪೀಠ ಚಾರ್ಜ್ ಶೀಟ್ ಸಲ್ಲಿಸುವಂತೆ ಸೂಚಿಸಿ ಎಪ್ರಿಲ್ ಮೊದಲ ವಾರಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
ಇದಕ್ಕೂ ಮೊದಲು ಜನವರಿ 30 ರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಲ್ಲಿ 2021 ದ್ವೇಷದ ಭಾಷಣದ ಪ್ರಕರಣಗಳ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು ಅಂತಿಮ ವರದಿ ಶೀಘ್ರ ಸಲ್ಲಿಸಲಾಗುವುದೆಂದು ದಿಲ್ಲಿ ಪೊಲೀಸರ ವಕೀಲರು ತಿಳಿಸಿದ್ದರು.
ಸುದರ್ಶನ್ ನ್ಯೂಸ್ ಸಂಪಾದಕ ಸುರೇಶ್ ಚಾವ್ಹಂಕೆ ಅವರ ನೇತೃತ್ವದಲ್ಲಿ ಡಿಸೆಂಬರ್ 2021 ರಲ್ಲಿ ಹಿಂದು ಯುವ ವಾಹಿನಿಯು ರಾಜಧಾನಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದ್ವೇಷದ ಭಾಷಣ ನೀಡಲಾಗಿತ್ತೆಂದು ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತ ವಿವರಗಳನ್ನು ಹೊಂದಿದ ಅಫಿಡವಿಟ್ ಸಲ್ಲಿಸುವಂತೆ ಈ ಹಿಂದೆ ನ್ಯಾಯಾಲಯ ದಿಲ್ಲಿ ಪೊಲೀಸರಿಗೆ ಸೂಚಿಸಿತ್ತು. ಹೋರಾಟಗಾರ ತುಷಾರ್ ಗಾಂಧಿ ಪರ ಹಾಜರಿದ್ದ ವಕೀಲ ಶದನ್ ಫರಾಸತ್ ಮಾತನಾಡಿ, ಇಂತಹ ದ್ವೇಷದ ಭಾಷಣಗಳನ್ನು ತಡೆಯಲು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದರು.
ದ್ವೇಷದ ಭಾಷಣ ಪ್ರಕರಣಗಳಲ್ಲಿ ಉತ್ತರಾಖಂಡ ಪೊಲೀಸರು ಮತ್ತು ದಿಲ್ಲಿ ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ ನ್ಯಾಯಾಂಗನಿಂದನೆಗೈದಿದ್ದಾರೆಂದು ತುಷಾರ್ ಗಾಂಧಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ದ್ವೇಷದ ಭಾಷಣವನ್ನು ಉತ್ತರಾಖಂಡದ ಹರಿದ್ವಾರದಲ್ಲಿ 2021 ರ ಡಿಸೆಂಬರ್ 17 ರಿಂದ 19 ತನಕ ನಡೆದ ಧರ್ಮ ಸಂಸದ್‌ನಲ್ಲಿ ಹಾಗೂ ದಿಲ್ಲಿಯಲ್ಲಿ ಡಿಸೆಂಬರ್ 19, 2021 ರಂದು ನಡೆದ ಕಾರ್ಯಕ್ರಮದಲ್ಲಿ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು.