×
Ad

ಉತ್ತರಪ್ರದೇಶ: ಮತ್ತೆ ದ್ವೇಷ ಕಾರಿದ ಬಜರಂಗ ಮುನಿ, ಮುಸ್ಲಿಮರ ನಿರ್ಮೂಲನಕ್ಕೆ ಕರೆ

Update: 2023-02-20 22:42 IST

ಲಕ್ನೋ,ಫೆ.20: ಹತ್ತು ತಿಂಗಳ ಹಿಂದಷ್ಟೇ ಮುಸ್ಲಿಮರ ಹತ್ಯೆ ಮತ್ತು ಅತ್ಯಾಚಾರಕ್ಕೆ ಹಿಂದುಗಳನ್ನು ಪ್ರಚೋದಿಸಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಉತ್ತರ ಪ್ರದೇಶದ ಸೀತಾಪುರ ಖೈರಾಬಾದ್ ನ ಶ್ರೀ ಲಕ್ಷ್ಮಣದಾಸ ಉದಾಸಿ ಆಶ್ರಮದ ಮಹಂತ ಬಜರಂಗ ಮುನಿ ದಾಸ್ ಈಗ ಮತ್ತೊಮ್ಮೆ ದ್ವೇಷ ಕಾರಿದ್ದಾರೆ. ‘ಮುಸ್ಲಿಮ್ ಜಿಹಾದಿ’ಗಳ ನಿರ್ಮೂಲ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಏಕೈಕ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಜಾಮೀನಿನಲ್ಲಿ ಹೊರಗಿರುವ ಮುನಿ ದಾಸ್,‘ಹಿಂದೆ ಭಾರತವು ಶಾಂತಿಯುತ ರಾಷ್ಟ್ರವಾಗಿತ್ತು ಮತ್ತು ಮುಸ್ಲಿಮರ ಪ್ರವೇಶದ ಬಳಿಕ ಶಾಂತಿ ನಾಶಗೊಂಡಿತ್ತು ಎನ್ನುವುದು ನಮಗೆ ತಿಳಿದಿದೆ. ಭಾರತವನ್ನು ಸ್ವಯಂಚಾಲಿತವಾಗಿ ಹಿಂದು ರಾಷ್ಟ್ರವನ್ನಾಗಿಸಲು ಮುಸ್ಲಿಮರ ನಿರ್ಮೂಲನ ಮಾಡಬೇಕು’ ಎಂದು ಹೇಳಿರುವ ವೀಡಿಯೊ ರವಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ಮಾನವ ಹಕ್ಕುಗಳ ಆಂದೋಲನ ಸಿಟಿಝನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ (ಸಿಜೆಪಿ) ತಿಳಿಸಿದೆ.

ಮುಖ್ಯಮಂತ್ರಿ ಶಿವರಾಜ ಚೌಹಾಣ್ ಅವರ ಸ್ಪಷ್ಟ ಬೆಂಬಲವನ್ನು ಹೊಂದಿರುವ ಮಧ್ಯಪ್ರದೇಶದ ಇನ್ನೋರ್ವ ಸಂತ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯು ಹಿಂದು ರಾಷ್ಟ್ರದ ಸ್ಥಾಪನೆಗೆ ಕಾರಣವಾಗಲಿದೆ ಎಂದು ಸುಳಿವು ನೀಡಿದ ಮರುದಿನವೇ ಮುನಿ ದಾಸ್ ಹೇಳಿಕೆ ಹೊರಬಿದ್ದಿದೆ ಎಂದು ಸಿಜೆಪಿ ವರದಿ ಮಾಡಿದೆ.

ಮುಸ್ಲಿಮರನ್ನು ಕೊಲ್ಲಲು ಹಾಗೂ ಅವರ ಹೆಣ್ಣುಮಕ್ಕಳನ್ನು ಅಪಹರಿಸಲು ಮತ್ತು ಅತ್ಯಾಚಾರವೆಸಗಲು ಹಿಂದುಗಳನ್ನು ಆಗ್ರಹಿಸಿದ್ದ ಆರೋಪದಲ್ಲಿ ಮುನಿ ದಾಸ್ ಕಳೆದ ವರ್ಷದ ಎ.13ರಂದು ಬಂಧಿಸಲ್ಪಟ್ಟಿದ್ದರು. ತನ್ನ ಹೇಳಿಕೆಗಾಗಿ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿದ ಬಳಿಕ ಎ.24ರಂದು ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ ಬಿಡುಗಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂದರ್ಭದಲ್ಲಿ ಮುನಿ ದಾಸ್ ‘ನನ್ನ ಹೇಳಿಕೆಗಾಗಿ ನನ್ನಲ್ಲಿ ಯಾವುದೇ ತಪ್ಪಿನ ಭಾವನೆಯಿಲ್ಲ ’ ಎಂದು ಹೇಳಿದ್ದರು.

Similar News