ಉಳ್ಳಾಲ ಕೋಟೆಪುರ -ಬೋಳಾರ ರಸ್ತೆಗೆ ಸೇತುವೆ ನಿರ್ಮಾಣ ಪ್ರಸ್ತಾವನೆ ಸರಕಾರದಿಂದ ಪುನರ್‌ಪರಿಶೀಲನೆ: ಸಿ.ಸಿ.ಪಾಟೀಲ್

ಯು.ಟಿ ಖಾದರ್ ಮನವಿಗೆ ಸಚಿವರ ಭರವಸೆ

Update: 2023-02-20 17:57 GMT

ಮಂಗಳೂರು, ಫೆ.20: ಉಳ್ಳಾಲ ಕೋಟೆಪುರದಿಂದ ಮಂಗಳೂರಿನ  ಬೋಳಾರಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆಗೆ ಕೋಟೆಪುರ ಕೋಡಿ ಬಳಿ  ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಪ್ರಸ್ತಾವನೆಯನ್ನು ಪುನರ್‌ ಪರಿಶೀಲಿಸಲಾಗುವುದು  ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್  ಸೋಮವಾರ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ವಿಧಾನ ಸಭೆಯ ವಿಪಕ್ಷ ಉಪನಾಯಕ, ಸ್ಥಳೀಯ ಶಾಸಕ ಯು.ಟಿ. ಖಾದರ್ ಅವರು ಮಾಡಿರುವ ಮನವಿಯಂತೆ ಸೇತುವೆ ನಿರ್ಮಾಣದ  ಪ್ರಸ್ತಾವನೆಯನ್ನು ಪುನರ್ ಪರಿಶೀಲನೆಗೆ ಹಣಕಾಸು ಇಲಾಖೆಗೆ ಕಳುಹಿಸಲಾಗುವುದು. ಹಣಕಾಸು ಇಲಾಖೆಯ ಒಪ್ಪಿಗೆ ದೊರೆತಲ್ಲಿ ಸೇತುವೆ ಕಾಮಗಾರಿಯನ್ನು  ಕೈಗೆತ್ತಿಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಯುಟಿ ಖಾದರ್ ಸದನದಲ್ಲಿ ಸಚಿವರು ನೀಡಿರುವ ಉತ್ತರದ ಬಗ್ಗೆ ಗಮನ ಸೆಳೆದು ಉಳ್ಳಾಲ ಕೋಟೆಪುರ - ಮಂಗಳೂರಿನ ಬೋಳಾರ ರಸ್ತೆಯು  ರಾಷ್ಟ್ರೀಯ ಹೆದ್ದಾರಿ ಆಗುವುದಕ್ಕಿಂತ ಮೊದಲು ಪ್ರಮುಖ ರಸ್ತೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ಆಗುವಾಗ ಆ ರಸ್ತೆಯ ಮಹತ್ವದ ಬಗ್ಗೆ ಯಾರು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಮತ್ತು ನಗರದಲ್ಲಿ ಟ್ರಾಫಿಕ್ ಜಾಮ್  ಸಮಸ್ಯೆ ಆಗಾಗ ಕಂಡು ಬರುತ್ತದೆ. ಮಂಗಳೂರು ನಗರದ ಸಂಪರ್ಕ ಕಡಿದು ಹೋಗುತ್ತಿದೆ. ಆದ ಕಾರಣ ಮಂಗಳೂರು ನಗರವನ್ನು ಸಂಪರ್ಕಿಸುವ ಪರ್ಯಾಯ ರಸ್ತೆಗೆ  ಕೋಟೆಪುರ ಕೋಡಿ ಬಳಿ ನದಿಗೆ  ಸೇತುವೆ ಕಾಮಗಾರಿಯನ್ನು ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳುವಂತೆ ಖಾದರ್ ವಿಧಾನ ಸಭೆಯಲ್ಲಿ ಮನವಿ ಮಾಡಿದರು.

"ಯಾರು ಅಡುಗೆ ಮಾಡಿದರೂ ಆಗಬಹುದು. ನಮಗೆ ಊಟ ಸಿಕ್ಕಿದರೆ ಸಾಕು" ಈ ರಸ್ತೆಯ ಕಾಮಗಾರಿಯನ್ನು ಯಾರು ಕೈಗೆತ್ತಿಗೊಂಡರೂ ಆಗಬಹುದು. ಕೆಆರ್‌ಡಿಸಿಎಲ್ ಕೈಗೆತ್ತಿಕೊಳ್ಳಬೇಕಿಂದಿಲ್ಲ, ಲೋಕೊಪಯೋಗಿ ಇಲಾಖೆಯಿಂದ ಕಾಮಗಾರಿ ಕೈಗೊಂಡರೂ ಆಗಬಹುದು ಎಂದು ಖಾದರ್ ಹೇಳಿದರು.

ಖಾದರ್ ಅವರ  ಕೇಳಿದ ಪ್ರಶ್ನೆ ಸಮಂಜಸವಾಗಿದೆ. ಈಗಾಗಲೇ ಕೆಆರ್‌ಡಿಸಿಎಲ್ ನಿಂದ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 217 ಸೇತುವೆಗಳನ್ನು  ಕೆಆರ್‌ಡಿಸಿಎಲ್ ನಿಂದ ಕೈಗೆತ್ತಿಕೊಳ್ಳಲಾಗಿತ್ತು. ಅವೆಲ್ಲವೂ ಪ್ರಗತಿಯಲ್ಲಿದೆ. ಆ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಹೊಸ ಕಾಮಗಾರಿಯನ್ನು ಕೈಗೆತ್ತಿಗೊಳ್ಳುವಂತೆ ಆರ್ಥಿಕ ಇಲಾಖೆಯಿಂದ ರಿಮಾರ್ಕ್ ಬಂದಿದೆ ಎಂದು ಸಚಿವರು ಹೇಳಿದರು.

ಖಾದರ್ ದ.ಕ.  ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರು. ರಾಜ್ಯಾದ್ಯಂತ 1590 ಕೋಟಿ ರೂ. ವೆಚ್ಚದಲ್ಲಿ 504 ಸೇತುವೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಕೋಟೆಪುರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಸೇರಿತ್ತು. ಈ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆಯ ಸೂಚನೆ ಮೇರೆಗೆ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು ಎಂದು ಸಚಿವರು ಈ ಮೊದಲು ಖಾದರ್ ಅವರ ಪ್ರಶ್ನೆಗೆ ಉತ್ತರ ನೀಡಿದ್ದರು.

Similar News