ಹರ್ಯಾಣ: ಭಿವಾನಿ ಸಾವು ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ ಆರೋಪ: ತನಿಖೆಗೆ ಸಿಟ್ ರಚನೆ

Update: 2023-02-20 18:39 GMT

ಚಂಡಿಗಢ, ಫೆ. 20: ಭಿವಾನಿ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳ  ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಅಪರಾಧ ತನಿಖಾ ಏಜೆನ್ಸಿಯ ತಂಡದ ವಿರುದ್ಧದ ನಿರ್ಲಕ್ಷ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು    ಹರಿಯಾಣ ಪೊಲೀಸ್ ವಿಶೇಷ ತನಿಖಾ ತಂಡವನ್ನು ರಚಿಸಿದೆ.  

ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ ನಕಲಿ ಗೋರಕ್ಷಕರು ಅಪಹರಿಸಿದ್ದಾರೆ ಎಂದು ಹೇಳಲಾದ ನಸೀರ್ ಹಾಗೂ ಜುನೈದ್ ಅವರ ಮೃತದೇಹ ಫೆಬ್ರವರಿ 16ರಂದು ಕಾರೊಂದರಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಜರಂಗ ದಳದ ಸದಸ್ಯ ಮೋನು ಮನೇಸರ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ, ರಿಂಕು ಸೈನಿ ಎಂಬಾತನನ್ನು ಮಾತ್ರ ಬಂಧಿಸಲಾಗಿತ್ತು.  

ನಕಲಿ ಗೋರಕ್ಷಕರು ಹಲ್ಲೆ ನಡೆಸಿದ ಬಳಿಕ ನಾಸಿರ್ ಹಾಗೂ ಜುನೈದ್‌ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು  ಹೋಗಿದ್ದರು. ಆದರೆ, ಹರ್ಯಾಣದ ನುಹ್ ಜಿಲ್ಲೆಯ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ನಿರಾಕರಿಸಿದ್ದರು  ಎಂದು ಜುನೈದ್ ಸಹೋದರ ಇಸ್ಮಾಯಿಲ್ ಆರೋಪಿಸಿದ್ದಾರೆ.

ನಕಲಿ ಗೋರಕ್ಷಕರ ತಂಡ ನಾಸಿರ್ ಹಾಗೂ ಜುನೈದ್‌ನನ್ನು ಅಪಹರಿಸಿದ ಬಳಿಕ ಪೊಲೀಸರನ್ನು ಭೇಟಿಯಾಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಅಪರಾಧ ತನಿಖಾ ಏಜೆನ್ಸಿ ಸಮೀಪದ ಎಲ್ಲ ಸಂಸ್ಥೆಗಳ ಸಿಸಿಟಿವಿ ದೃಶ್ಯಾವಳಿಯನ್ನು ರಾಜಸ್ಥಾನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಈ ಆರೋಪ ಆಧಾರ ರಹಿತ ಎಂದು ನೂಹ್ ಪೊಲೀಸ್ ಅಧೀಕ್ಷಕ ವರುಣ್ ಸಿಂಗ್ಲಾ ಅವರು ಹೇಳಿದ್ದಾರೆ. ಈ ಆರೋಪದ ಬಗ್ಗೆ ತನಿಖೆ ನಡೆಸಲು ಉಪ ಪೊಲೀಸ್ ಅಧೀಕ್ಷಕ ಉಷಾ ಕುಂಡು ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.  

ಅಪರಾಧ  ತನಿಖಾ ಏಜೆನ್ಸಿಯ ಪಾತ್ರದ ಕುರಿತ ರಾಜಸ್ಥಾನ ಪೊಲೀಸರಿಂದ  ವರದಿಗಾಗಿ ಕಾಯುತ್ತಿದ್ದೇವೆ. ಒಂದು ವೇಳೆ ನಮ್ಮ ಪೊಲೀಸರು ಭಾಗಿಯಾಗಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ಲಾ  ಹೇಳಿದ್ದಾರೆ. 

ಈ ನಡುವೆ ನಾಸಿರ್ ಹಾಗೂ ಜುನೈದ್ ಅವರ ಕುಟುಂಬದ ಸದಸ್ಯರು ಮನೇಸರ್‌ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ‘‘ನಮಗೆ ನ್ಯಾಯ ದೊರಕಿಲ್ಲ’’ ಎಂದು ಜುನೈದ್ ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ‘‘ಮೋನು ಮನೇಸರ್‌ನನ್ನು ಬಂಧಿಸಬೇಕು. ಅಲ್ಲಿ ವರೆಗೆ ಧರಣಿ ಮುಂದುವರಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

Similar News