ದೇಶದಲ್ಲಿ 1.2 ಲಕ್ಷ ಏಕ ಶಿಕ್ಷಕ ಶಾಲೆಗಳು!

Update: 2023-02-21 02:53 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 1.3 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಶಾಲೆ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮಾಡುವ ಅಂದಾಜು ವೆಚ್ಚವನ್ನು 2022-23ನೇ ಸಾಲಿಗೆ ಹೋಲಿಸಿದರೆ ಶೇಕಡ 8.3ರಷ್ಟು ಹೆಚ್ಚಿಸಲಾಗಿದೆ. ಆದರೆ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸುಧಾರಣೆಯ ಅಗತ್ಯವಿದೆ ಎನ್ನುವ ಅಂಶ ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಿಂದ ತಿಳಿದು ಬರುತ್ತದೆ.

ವಿದ್ಯಾರ್ಥಿ- ಶಿಕ್ಷಕರ ಅನುಪಾತ ಮತ್ತು ಏಕ ಶಿಕ್ಷಕ ಶಾಲೆಗಳ ಸಂಖ್ಯೆಯನ್ನು ನೋಡಿದಾಗ ತರಬೇತಿ ಪಡೆದ ಬೋಧಕ ಸಿಬ್ಬಂದಿಯ ಕೊರತೆ ವ್ಯಾಪಕವಾಗಿ ಇರುವುದು ವ್ಯಕ್ತವಾಗುತ್ತದೆ. ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿದ ಹೊರತಾಗಿಯೂ, ಬಹುತೇಕ ಶಾಲೆಗಳಿಗೆ ಇಂಟರ್‌ನೆಟ್ ಸೌಲಭ್ಯ ಇಲ್ಲ.

ಅಧಿಕ ಜನಸಂಖ್ಯೆ ಹೊಂದಿರುವ ಅಥವಾ ಜನಸಾಂದ್ರತೆ ಅಧಿಕ ಇರುವ ರಾಜ್ಯಗಳಲ್ಲಿ ವಿದ್ಯಾರ್ಥಿ- ಶಿಕ್ಷಕ ಅನುಪಾತ ತೀರಾ ಹದಗೆಟ್ಟಿದೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ವಿದ್ಯಾರ್ಥಿ- ಶಿಕ್ಷಕ ಅನುಪಾತ ಕನಿಷ್ಠವಾಗಿದೆ. ಇವು ದೇಶದಲ್ಲಿ ಗರಿಷ್ಠ ಜನಸಂಖ್ಯೆ ಹೊಂದಿದ ರಾಜ್ಯಗಳು ಮಾತ್ರವಲ್ಲದೇ ತೀರಾ ಬಡ ರಾಜ್ಯಗಳೂ ಹೌದು. ಇದಕ್ಕೆ ವಿರುದ್ಧವಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ವಿದ್ಯಾರ್ಥಿ- ಶಿಕ್ಷಕ ಅನುಪಾತ ಉತ್ತಮವಾಗಿದೆ. ಕಳಪೆ ವಿದ್ಯಾರ್ಥಿ- ಶಿಕ್ಷಕ ಅನುಪಾತ ಹೊಂದಿದ್ದರೂ, ಹರ್ಯಾಣ, ಪಶ್ಚಿಮ ಬಂಗಾಳ ಮತ್ತು ದೆಹಲಿಯಂಥ ರಾಜ್ಯಗಳಲ್ಲಿ ಸಾಕ್ಷರತೆ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಇದೆ.

ದೇಶದ ಒಟ್ಟು ಶಾಲೆಗಳ ಪೈಕಿ ಶೇಕಡ 8ರಷ್ಟು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಅಧಿಕ ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕೂಡಾ ಏಕ ಶಿಕ್ಷಕ ಶಾಲೆಗಳಿವೆ. ಉದಾಹರಣೆಗೆ ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿ- ಶಿಕ್ಷಕ ಅನುಪಾತ 25 ಇದ್ದು, ಇದು ಆರ್‌ಟಿಇ ಕಾಯ್ದೆಯಡಿ ಕಡ್ಡಾಯಪಡಿಸಲಾದ ಮಟ್ಟಕ್ಕಿಂತ ಉತ್ತಮವಾಗಿದೆ. ಆದರೆ ಇಲ್ಲಿ ಕೂಡಾ ಏಕ ಶಿಕ್ಷಕ ಶಾಲೆಗಳು ಅತ್ಯಧಿಕ ಇವೆ. ದೊಡ್ಡ ರಾಜ್ಯಗಳ ಪೈಕಿ ಕೇರಳದಲ್ಲಿ ಅತ್ಯಂತ ಕಡಿಮೆ ಅಂದರೆ 310 ಏಕ ಶಿಕ್ಷಕ ಶಾಲೆಗಳಿವೆ.

ಸರ್ಕಾರ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿದ್ದರೂ, ನಾಲ್ಕನೇ ಒಂದರಷ್ಟು ಶಾಲೆಗಳಲ್ಲಿ ಇನ್ನೂ ಇಂಟರ್‌ನೆಟ್ ಸಂಪರ್ಕ ಇಲ್ಲ.

Similar News