ವರದಕ್ಷಿಣೆಯಲ್ಲಿ ಹಳೆ ಪೀಠೋಪಕರಣ ನೀಡಿದ ವಧು ಕುಟುಂಬ: ವಿವಾಹ ನಿರಾಕರಿಸಿದ ವರ

Update: 2023-02-21 05:50 GMT

ಹೈದರಾಬಾದ್: ವಧುವಿನ ಕುಟುಂಬದವರು ವರದಕ್ಷಿಣೆಯಾಗಿ ಹಳೆಯ ಪೀಠೋಪಕರಣಗಳನ್ನು ನೀಡಿದ್ದಾರೆ ಎಂದು ಆಪಾದಿಸಿ ವ್ಯಕ್ತಿಯೊಬ್ಬ ವಿವಾಹ ನಿರಾಕರಿಸಿದ ಘಟನೆ ಸೋಮವಾರ ವರದಿಯಾಗಿದೆ.

ಬಸ್ ಚಾಲಕನಾಗಿದ್ದ ವರ ಭಾನುವಾರ ನಡೆಯಬೇಕಿದ್ದ ವಿವಾಹ ಸಮಾರಂಭಕ್ಕೆ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ವರನ ವಿರುದ್ಧ ಪ್ರಕರಣ ದಾಖಲಾಗಿದೆ.

ವರನ ಮನೆಗೆ ತೆರಳಿದಾಗ ನಮ್ಮ ಜತೆ ಅನುಚಿತವಾಗಿ ವರ್ತಿಸಿದರು ಎಂದು ವಧುವಿನ ತಂದೆ ಮಾಧ್ಯಮಗಳ ಎದುರು ಅಳಲು ತೋಡಿಕೊಂಡರು. "ನಾವು ಕೇಳಿದ ವಸ್ತುಗಳನ್ನು ನೀಡಿಲ್ಲ. ಜತೆಗೆ ನೀಡಿದ ಪೀಠೋಕರಣಗಳು ಕೂಡ ಹಳೆಯವು" ಎಂಬ ಕಾರಣ ನೀಡಿ ವಿವಾಹಕ್ಕೆ ಆಗಮಿಸಲು ನಿರಾಕರಿಸಿದರು. ವಿವಾಹ ಸಮಾರಂಭಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಿ, ಅತಿಥಿಗಳು ಹಾಗೂ ಸಂಬಂಧಿಕರನ್ನು ಆಹ್ವಾನಿಸಿದ್ದೆ. ಆದರೆ ವರ ಮದುವೆಗೆ ಬರಲಿಲ್ಲ ಎಂದು ವಧುವಿನ ತಂದೆ ವಿವರಿಸಿದರು.

ವರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್‌ಗಳು ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Similar News