ಕೃಷಿ ಅಧ್ಯಯನಕ್ಕೆ ಕೇರಳ ನಿಯೋಗದೊಂದಿಗೆ ಇಸ್ರೇಲ್‌ಗೆ ತೆರಳಿದ್ದ ವ್ಯಕ್ತಿ ನಾಪತ್ತೆ

Update: 2023-02-21 07:49 GMT

ಜೆರುಸಲೇಂ/ಹೊಸದಿಲ್ಲಿ: ಹೊಸ ಕೃಷಿ ತಂತ್ರಗಳನ್ನು ಅಧ್ಯಯನ ಮಾಡಲು ಇಸ್ರೇಲ್‌ಗೆ ತೆರಳಿದ್ದ 27 ಸದಸ್ಯರ ನಿಯೋಗದಿಂದ ಕೇರಳದ ರೈತ ಬಿಜು ಕುರಿಯನ್ ಎಂಬವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಪೊಲೀಸರು ಬಿಜು ಕುರಿಯನ್‌ ಗಾಗಿ ತೀವ್ರ ಶೋಧವನ್ನು ಪ್ರಾರಂಭಿಸಿದ್ದಾರೆ. ಕೇರಳ ರಾಜ್ಯ ಕೃಷಿ ಕಾರ್ಯದರ್ಶಿ ಬಿ ಅಶೋಕ್ ನೇತೃತ್ವದ ನಿಯೋಗದ ಭಾಗವಾಗಿ ಕುರಿಯನ್ ನಾಲ್ಕು ದಿನಗಳ ಹಿಂದೆ ಇಸ್ರೇಲ್ ತಲುಪಿದ್ದರು.

ಶುಕ್ರವಾರ, ಅವರು ಇಸ್ರೇಲ್‌ನ ಹರ್ಜ್ಲಿಯಾ ನಗರದ ಹೋಟೆಲ್‌ನಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕೃಷಿ ಕಾರ್ಯದರ್ಶಿ ಭಾರತೀಯ ರಾಯಭಾರ ಕಚೇರಿಗೆ ವಿಷಯ ತಿಳಿಸಿದ್ದು, ಇಸ್ರೇಲ್‌ನಲ್ಲಿರುವ ಹರ್ಜ್ಲಿಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಕುರಿಯನ್ ಅವರ ವೀಸಾ ಮೇ 8 ರವರೆಗೆ ಮಾನ್ಯವಾಗಿದ್ದು, ಇಸ್ರೇಲ್‌ ನಲ್ಲಿ ಅಕ್ರಮವಾಗಿ ನೆಲೆಸಲು ಗುಂಪಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಇತರ ನಿಯೋಗದ ಸದಸ್ಯರು ಆರೋಪಿಸಿದ್ದಾರೆ.

 ಕುರಿಯನ್ ಅವರು ಇಸ್ರೇಲ್‌ನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ರವಿವಾರ ಪತ್ನಿಗೆ ಕರೆ ಮಾಡಿ ತಿಳಿಸಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ತನ್ನನ್ನು ಹುಡುಕದಂತೆ ಮನೆಯವರಿಗೂ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಏತನ್ಮಧ್ಯೆ, ಕುರಿಯನ್‌ ಇಸ್ರೇಲ್‌ ಗೆ ತೆರಳಿರುವ ನಿಯೋಗವನ್ನು ಸೇರಲು ಹೇಗೆ ಯಶಸ್ವಿಯಾದರು ಎಂಬುದರ ಕುರಿತು ಕೇರಳ ಸರ್ಕಾರವು ವಿಚಾರಣೆಯನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಓಲಾ ಹೂಡಿಕೆ: ಕರ್ನಾಟಕದ ಕೈ ತಪ್ಪಿದ್ದಕ್ಕೆ ಸರ್ಕಾರವನ್ನು ತರಾಟೆಗೆಳೆದ ಪ್ರತಿಪಕ್ಷ, ಉದ್ಯಮಿಗಳು

Similar News