ಎಲ್ಲ ಧರ್ಮಗಳಲ್ಲೂ ವಿಚ್ಛೇದನ ನಡೆಯುವಾಗ ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿಸಿದ್ದೇಕೆ: ಪಿಣರಾಯಿ ವಿಜಯನ್ ಪ್ರಶ್ನೆ

Update: 2023-02-21 10:18 GMT

ಕಾಸರಗೋಡು: ತ್ರಿವಳಿ ತಲಾಖ್ ಕಾನೂನಿನ ಬಗ್ಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದು, "ಎಲ್ಲಾ ಧರ್ಮಗಳಲ್ಲಿ ವಿಚ್ಛೇದನಗಳು ಸಂಭವಿಸುತ್ತದೆ. ಆದರೆ, ಮುಸ್ಲಿಮರಲ್ಲಿನ ತ್ರಿವಳಿ ತಲಾಖ್   ಅಭ್ಯಾಸವನ್ನು ಮಾತ್ರ ಅಪರಾಧೀಕರಣ ಮಾಡಿದ್ದು ಏಕೆ?" ಎಂದು ಪ್ರಶ್ನಿಸಿದ್ದಾರೆ.

"ಎಲ್ಲಾ ಧರ್ಮಗಳಲ್ಲಿ ವಿಚ್ಛೇದನಗಳು ನಡೆಯುತ್ತಿದ್ದರೂ, ತ್ರಿವಳಿ ತಲಾಖ್ ಅನ್ನು ಮಾತ್ರವೇ ಕಾನೂನಿನ ಮೂಲಕ ಅಪರಾಧೀಕರಣಗೊಳಿಸಲಾಗಿದೆ. ಇದು ಮುಸ್ಲಿಮರಿಗೆ ಮಾತ್ರ ಕ್ರಿಮಿನಲ್‌ ಅಪರಾಧವೇಕೆ? ಇತರ ಎಲ್ಲಾ ವಿಚ್ಚೇದನ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಿವಿಲ್‌ ವಿಷಯವಾಗಿ ನೋಡಲಾಗುತ್ತದೆ. ಆದರೆ ಮುಸ್ಲಿಂ ದಂಪತಿಗಳ ವಿಚ್ಛೇದನವನ್ನು ಅಪರಾಧೀಕರಣಗೊಳಿಸುವ ಮೂಲಕ ಮುಸ್ಲಿಂ ಪುರುಷರನ್ನು ಜೈಲಿಗೆ ತಳ್ಳಬಹುದು ಎಂಬ ಕಾರಣಕ್ಕಾಗಿ ಅಪರಾಧವಾಗಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಕೇರಳದ ಗಡಿ ಪ್ರದೇಶ ಕಾಸರಗೋಡಿನಲ್ಲಿ ಆಡಳಿತ ಪಕ್ಷ ಸಿಪಿಎಂನ ಮೆರವಣಿಗೆ ‘ಜನಕೀಯ ಪ್ರತಿರೋಧ ಜಾಥಾ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಲ್ಪಸಂಖ್ಯಾತ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಜೈನರು ಮತ್ತು ಪಾರ್ಸಿಗಳಿಗೆ ಪೌರತ್ವ ನೀಡಲು ಅನುಕೂಲವಾಗುವಂತೆ ಕೇಂದ್ರವು ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಕೇರಳದಲ್ಲಿ ಯಾವುದೇ ಕಾರಣಕ್ಕೂ ಜಾರಿಗೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿದರು.

Similar News