ಮಣಿಪಾಲ: ಫೆ.22ರಿಂದ ಶಿವಪಾಡಿ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ

Update: 2023-02-21 16:15 GMT

ಮಣಿಪಾಲ, ಫೆ.21: ಇಲ್ಲಿನ ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಹಾಗೂ ಅತಿರುದ್ರ ಮಹಾಯಾಗ ಸಮಿತಿಯ ಜಂಟಿ ಆಶ್ರಯದಲ್ಲಿ ಇದೇ ಫೆ.22ರಿಂದ ಮಾ.5ರವರೆಗೆ ಕರಾವಳಿಯಲ್ಲಿ ಮೊದಲ ಅತಿರುದ್ರ ಮಹಾಯಾಗ ಶೃಂಗೇರಿ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ, ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಶಿವಪಾಡಿ ದೇವಸ್ಥಾನ ಆವರಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅತಿರುದ್ರ ಯಾಗದ ವಿವರಗಳನ್ನು ನೀಡಿದ ಅವರು, ಮಹಾಯಾಗವು 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಯಾಗದ ವೇದಿಕೆ, ಯಾಗ ಮಂಟಪವನ್ನು ರಚಿಸಲಾಗಿದೆ. ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ 2000 ವೀಕ್ಷಿಸಲು ಸಾಧ್ಯವಾಗುವಂತೆ ಬಾರತೀತೀರ್ಥ ಸಭಾಮಂಟಪ ವನ್ನು ಸಜ್ಜುಗೊಳಿಸಲಾಗಿದೆ ಎಂದರು.

ಈ ಯಾಗದಲ್ಲಿ ಭಾಗವಹಿಸಲು ಶೃಂಗೇರಿಯಿಂದ ಆಗಮಿಸುವ 180 ಮಂದಿ ಋತ್ವಿಜರ ವಾಸ್ತವ್ಯಕ್ಕಾಗಿ ‘ಈಶಾವಾಸ್ಯಂ’ ವಸತಿಗೃಹವನ್ನು ನಿರ್ಮಿಸ ಲಾಗಿದೆ. 12ದಿನಗಳ ಕಾಲ ಅತಿರುದ್ರ ಮಹಾಯಾಗಕ್ಕೆ ಆಗಮಿಸುವ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತಾದಿಗಳ ಭೋಜನ ವ್ಯವಸ್ಥೆಗೆ ಅನ್ನಪೂರ್ಣ ಭೋಜನ ಶಾಲೆ ಸಜ್ಜಾಗಿದೆ ಎಂದರು.

ಜಿಲ್ಲೆಯಲ್ಲಿ ಮಹಾಯಾಗ ನಡೆದಿದೆ. ಆದರೆ ಅತಿರುದ್ರ ಮಹಾಯಾಗ ಈವರೆಗೆ ನಡೆದಿಲ್ಲ. ಶೃಂಗೇರಿಯಲ್ಲಿ ಮಾತ್ರ ಈ ಯಾಗ ನಡೆದಿರುವ ಮಾಹಿತಿ ಇದ್ದು, ಶೃಂಗೇರಿಯ ವೈದಿಕರೇ ಅತಿರುದ್ರ ಮಹಾಯಾಗವನ್ನು ನಡೆಸುವವ ರಾಗಿದ್ದು, ಶೃಂಗೇರಿ ಪೀಠಾಧಿಪತಿಗಳ ಪೂರ್ಣ ಸಮ್ಮತಿಯೊಂದಿಗೆ ಅವರ ಉಪಸ್ಥಿತಿಯಲ್ಲೇ ಇದು ನಡೆಯಲಿದೆ ಎಂದು ರಘುಪತಿ ಭಟ್ ತಿಳಿಸಿದರು.

ಅತಿರುದ್ರ ಮಹಾಯಾಗದಲ್ಲಿ ಸಾರಿಗೆ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವ ಸೂರ್ಯ, ಅಣ್ಣಾಮಲೈ ಆಗಮಿಸುವುದು ಖಚಿತವಾಗಿದೆ. ಇನ್ನೂ ಅನೇಕ ಗಣ್ಯರು ಇದರಲ್ಲಿ ಭಾಗವಹಿಸಲಿ ದ್ದಾರೆ ಎಂದರು.

ಸುಮಾರು ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಡೆಯುವ ಈ ಅಪರೂಪದ ಯಾಗಕ್ಕೆ ಮಾಹೆಯ ಸಹಕಾರದೊಂದಿಗೆ 7-8 ಎಕರೆ ಜಾಗವನ್ನು ಸಜ್ಜುಗೊಳಿಸಲಾಗಿದೆ. ಇನ್ನು ವಾರಾಣಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಶಿವಪಾಡಿಯಲ್ಲಿ ಶಿವಾರತಿ ನಡೆಸಲು ಸಿದ್ಧತೆ ಮಾಡಲಾಗಿದೆ. ಉಡುಪಿಯ ಜನತೆ ಇದಕ್ಕಾಗಿ ಹಸಿರುಹೊಣೆ ಕಾಣಿಕೆಯನ್ನು ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮಹೇಶ್ ಠಾಕೂರ್, ಅತಿರುದ್ರ ಮಹಾಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ಸತೀಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ, ಇತರ ಪದಾಧಿಕಾರಿಗಳಾದ ರತ್ನಾಕರ ಇಂದ್ರಾಳಿ, ಗೋಪಾಲಕೃಷ್ಣ ಪ್ರಭು, ದಿನೇಶ್ ಪ್ರಭು ಹಾಗೂ ಸಂಜಯ ಪ್ರಭು ಉಪಸ್ಥಿತರಿದ್ದರು.

Similar News