ಎಫ್‌ಸಿಐ ಲಂಚ ಆರೋಪ: 50 ಕಡೆಗಳಲ್ಲಿ ಸಿಬಿಐ ದಾಳಿ
ಹೊಸದಿಲ್ಲಿ: ಅರ್ಥಿಯಾ, ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಮತ್ತು ಪಂಜಾಬ್ ರಾಜಕಾರಣಿಗಳ ಅಕ್ರಮ ನಂಟನ್ನು ಬೇಧಿಸುವ ಪ್ರಯತ್ನವಾಗಿ ಸಿಬಿಐ ಮಂಗಳವಾರ ಪಂಜಾಬ್‌ನ 50 ಕಡೆಗಳಲ್ಲಿ ಮಿಂಚಿನ ದಾಳಿ ನಡೆಸಿದೆ. ಎಫ್‌ಸಿಐ ಅಧಿಕಾರಿಗಳು ಕಿರಾಣಿ ವರ್ತಕರು ಹಾಗೂ ಖಾಸಗಿ ಅಕ್ಕಿ ಗಿರಣಿ ಮಾಲೀಕರ ಜತೆ ಸೇರಿ ಲಂಚದ ಕೂಟ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಇದುವರೆಗೆ ನಡೆದ ಶೋಧ ಕಾರ್ಯಾಚರಣೆಯಿಂದ ಕನಿಷ್ಠ 350 ಕೋಟಿ ರೂಪಾಯಿಗಳ ಲಂಚ ಪ್ರಕರಣವನ್ನು ಬಹಿರಂಗಗೊಳಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಫೆಡರೇಷನ್ ಆಫ್ ಅರ್ಥಿಯಾಸ್ ಅಸೋಸಿಯೇಷನ್ ಆಫ್ ಪಂಜಾಬ್‌ನ ಪದಾಧಿಕಾರಿಗಳ ಮನೆಗಳ ಮೇಲೆ ಮಂಗಳವಾರ ದಾಳಿ ನಡೆದಿದೆ. ಅಧ್ಯಕ್ಷ ವಿಜಲ್ ಕಲ್ರಾ ಕಾರ್ಯದರ್ಶಿ ದೀಪಲ್ ತಯಾಲ್, ಸಂಘದ ಜಿಲ್ಲಾಮಟ್ಟದ ಅಧ್ಯಕ್ಷ ಜಸ್ವೀಂದರ್ ರಾಣಾ ಅವರ ನೆಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಧ್ಯಕ್ಷರು ಹಾಗೂ ಉಪಾಧ್ಯಕ್ಷರ ಮನೆಗಳ ಮೇಲೂ ದಾಳಿ ನಡೆದಿದೆ. ದಾಳಿಗೆ ಒಳಗಾಗಿರುವ ಬಹುತೇಕ ಪದಾಧಿಕಾರಿಗಳು 2020ರ ನವೆಂಬರ್‌ನಲ್ಲಿ ನಡೆದ ಸಿಂಘು ಗಡಿ ರೈತ ಹೋರಾಟದಲ್ಲಿ ಭಾಗವಹಿಸಿದ್ದರು. ಎಫ್‌ಸಿಐ ಅಧಿಕಾರಿಗಳ ಜತೆ ಷಾಮೀಲಾಗಿ, ಲಂಚ ನೀಡಿ ಕಳಪೆ ಗುಣಮಟ್ಟದ ಅಕ್ಕಿ ಮಾರಾಟ ಮಾಡಿದ್ದಾರೆ ಎನ್ನುವುದು ಇವರ ಮೇಲಿನ ಆರೋಪ.
ಕನಕ್-2 ಹೆಸರಿನ ಈ ವಿಶೇಷ ಕಾರ್ಯಾಚರಣೆಯನ್ನು ಮನ್ಸಾ, ಹೊಶಿಯಾರ್‌ಪುರ, ಫಿರೋಜ್‌ಪುರ, ಲೂಧಿಯನಾ, ಸಂಗ್ರೂರು ಮತ್ತಿತರ ಕಡೆಗಳಲ್ಲಿ ನಡೆಸಲಾಗಿದೆ. ಈಗಾಗಲೇ ಎಫ್‌ಸಿಐ ಗುಣಮಟ್ಟ ನಿಯಂತ್ರಣ ವಿಭಾಗದ ಡಿಜಿಎಂ, ಖರಾರ್‌ನ ಉದ್ಯಮಿ ಹಾಗೂ ಚಂಡೀಗಢ ಎಫ್‌ಸಿಐನ ಪ್ರಯೋಗಾಲಯ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ.