ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವ್ಯಂಗ್ಯಭರಿತ ಹಾಡು ಹಾಡಿದ್ದ ಗಾಯಕಿಗೆ ನೋಟಿಸ್ ಜಾರಿಗೊಳಿಸಿದ ಪೊಲೀಸರು

Update: 2023-02-22 08:53 GMT

ಲಕ್ನೊ: ಕಾನ್ಪುರದಲ್ಲಿ ನಡೆದ ಮನೆ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ತಾಯಿ ಮತ್ತು ಮಗಳು ಸಾವಿಗೀಡಾದ ಸಂದರ್ಭವನ್ನು ಆಧರಿಸಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವ್ಯಂಗ್ಯಭರಿತ ಗೀತೆ ಹಾಡಿದ್ದ ಜನಪ್ರಿಯ ಭೋಜಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಕಳೆದ ವಾರ ಗುಡಿಸಲಿಗೆ ಪೊಲೀಸರು ಬೆಂಕಿ ಹಚ್ಚಿದ್ದರಿಂದ ಪ್ರಮೀಳಾ ದೀಕ್ಷಿತ್ (45) ಹಾಗೂ ಆಕೆಯ ಪುತ್ರಿ ನೇಹಾ (20) ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾಗಿರುವ ಘಟನೆಯನ್ನು ಆಧರಿಸಿ ಗಾಯಕಿ ನೇಹಾ ಸಿಂಗ್ ರಾಥೋಡ್ "ಯುಪಿ ಮೆ ಕಾ ಬಾ" ಎಂಬ ಗೀತೆ ಹಾಡಿದ್ದು, ಅದೀಗ ವೈರಲ್ ಆಗಿದೆ.

ಈ ಗೀತೆಯೀಗ ಉತ್ತರ ಪ್ರದೇಶ ಪೊಲೀಸರು ಆಕೆಯ ಮನೆ ಮುಂದೆ ಹಾಜರಾಗುವಂತೆ ಮಾಡಿದ್ದು, ಈ ಗೀತೆಯಿಂದ ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಪೊಲೀಸರ ಆರೋಪವಾಗಿದೆ. ಈ ಗೀತೆ ಹಾಗೂ ಈ ಗೀತೆ ಹೇಗೆ ನಿರ್ಮಾಣವಾಯಿತು ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರು ಪ್ರಶ್ನೆಗಳ ಪಟ್ಟಿಯೊಂದನ್ನು ಗಾಯಕಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

ಈ ಪ್ರಶ್ನೆಗಳ ಪಟ್ಟಿಯಲ್ಲಿ ವಿಡಿಯೊದಲ್ಲಿರುವುದು ನೀವೇ, ಅಲ್ಲವೆ ಎಂಬುದನ್ನು ದೃಢಪಡಿಸಿ, ಗೀತೆಯ ಸಾಹಿತ್ಯವನ್ನು ನೀವೇ ರಚಿಸಿದ್ದರೆ ಅದಕ್ಕೆ ನೀವು ಬದ್ಧವಾಗಿದ್ದೀರಾ ಮತ್ತು ಈ ವಿಡಿಯೊದಿಂದ ಸಮಾಜದ ಮೇಲಾಗುವ ದುಷ್ಪರಿಣಾಮದ ಬಗ್ಗೆ ನಿಮಗೆ ಅರಿವಿದೆಯೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ.

ಒಂದು ವೇಳೆ ನಿಮ್ಮ ಪ್ರತಿಕ್ರಿಯೆ ಅತೃಪ್ತಿಕರವಾಗಿದ್ದರೆ, ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಮತ್ತು ಸಮರ್ಪಕ ಕಾನೂನಾತ್ಮಕ ತನಿಖೆ ಕೈಗೊಳ್ಳಲಾಗುವುದು ಎಂದು ನೋಟಿಸಿನಲ್ಲಿ ಪೊಲೀಸರು ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಖಂಡಿಸಿದ್ದಾರೆ.

ನೇಹಾ ಸಿಂಗ್ ರಾಥೋಡ್ ಜನಪ್ರಿಯ ಭೋಜಪುರಿ ಗಾಯಕಿಯಾಗಿದ್ದು, ತಮ್ಮ ವ್ಯಂಗ್ಯಭರಿತ ಗೀತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಈ ಹಿಂದೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಲಾಲ್ ಪ್ರಸಾದ್ ಯಾದವ್ ಕುರಿತೂ ವ್ಯಂಗ್ಯಭರಿತ ಗೀತೆಗಳನ್ನು ಹಾಡಿದ್ದರು.

Similar News