ಮಾತನಾಡಿದ್ದೆಲ್ಲವೂ ದ್ವೇಷ ಭಾಷಣವಲ್ಲ: ಸುಪ್ರೀಂ ಕೋರ್ಟ್

Update: 2023-02-22 08:18 GMT

ಹೊಸದಿಲ್ಲಿ: ಭಾರತೀಯ ದಂಡ ಸಂಹಿತೆಯ 153A ಸೆಕ್ಷನ್ ಅನ್ನು ವ್ಯಾಖ್ಯಾನಿಸುವಾಗ ಮಾತನಾಡಿದ್ದೆಲ್ಲ ದ್ವೇಷ ಭಾಷಣವಾಗುವುದಿಲ್ಲ ಎಂಬ ಸಂಗತಿಯನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಳ್ಳಬೇಕಿದೆ ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಸೋಮವಾರ ವ್ಯಕ್ತಪಡಿಸಿದೆ ಎಂದು indianexpress.com ವರದಿ ಮಾಡಿದೆ.

ಜನವರಿ 29ರಂದು ಏಕಲ್ ಹಿಂದೂ ಸಮಾಜ್ ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ಕೆ.ಎಂ.ಜೋಸೆಫ್ ಹಾಗೂ ನ್ಯಾ. ಬಿ‌.ವಿ‌.ನಾಗರತ್ನ ಅವರನ್ನೊಳಗೊಂಡಿದ್ದ ನ್ಯಾಯಪೀಠವು ಮೇಲಿನಂತೆ ಅಭಿಪ್ರಾಯ ಪಟ್ಟಿತು.

ಈ ಪ್ರಕರಣದಲ್ಲಿನ ಭಾಷಣದ ಲಿಖಿತ ರೂಪವನ್ನು ಓದಿದರೆ ನ್ಯಾಯಾಲಯಕ್ಕೆ ಆ ಭಾಷಣವು ದ್ವೇಷ ಭಾಷಣವಾಗುತ್ತದೆ ಎಂದು ಮನವರಿಕೆಯಾಗುತ್ತದೆ ಎಂದು ವಕೀಲರು ಮನವಿ ಮಾಡಿದರು. ಆದರೆ, ಈ ಮನವಿಯನ್ನು ತಳ್ಳಿ ಹಾಕಿದ ನ್ಯಾ. ಜೋಸೆಫ್, ಇದುವರೆಗೂ ದ್ವೇಷ ಭಾಷಣವೆಂದರೇನು ಎಂಬ ಬಗ್ಗೆ ಯಾವುದೇ ಸ್ಪಷ್ಟ ವ್ಯಾಖ್ಯಾನವಿಲ್ಲ ಎಂಬುದರತ್ತ ಬೊಟ್ಟು ಮಾಡಿದರು. ಅದಕ್ಕಾಗಿ ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಹಾಗೂ 295A (ಉದ್ದೇಶಪೂರ್ವಕ ಹಾಗೂ ಘನತೆಗೆ ಕುಂದುಂಟು ಮಾಡುವ ನಡವಳಿಕೆ, ಯಾವುದೇ ವರ್ಗವು ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುವುದು) ಅನ್ನೇ ಅವಲಂಬಿಸಬೇಕಿದೆ. ಈ ಅವಕಾಶಗಳನ್ನು ಇಂತಹ ಪ್ರವೃತ್ತಿ ಹೊಂದಿರುವ ಕೆಲವು ವ್ಯಕ್ತಿಗಳ ವಿರುದ್ಧವೂ ಬಳಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.

Similar News