ಗುಜರಾತ್: ಐವರು ಮುಸ್ಲಿಮರನ್ನು ಕಟ್ಟಿಹಾಕಿ ಥಳಿಸಿದ್ದು ಶಾಂತಿ ಸೌಹಾರ್ದತೆ ಕಾಪಾಡುವ ಕ್ರಮ ಎಂದು ಸಮರ್ಥಿಸಿದ ಎಸ್ಪಿ

Update: 2023-02-22 12:40 GMT

ಅಹ್ಮದಾಬಾದ್: ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ಸಾರ್ವಜನಿಕವಾಗಿ ಮುಸ್ಲಿಂ ವ್ಯಕ್ತಿಗಳನ್ನು ಥಳಿಸಿದ  ಘಟನೆಯನ್ನು ಸಮರ್ಥಿಸಿಕೊಂಡಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಶಾಂತಿ ಸೌಹಾರ್ದತೆ ಕಾಪಾಡಲು ಈ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

ಗುಜರಾತ್‌ ಹೈಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಶ್‌ ಕುಮಾರ್‌ ಗಢಿಯಾ ಹೇಳಿದ್ದಾರೆ.

ಗುಜರಾತಿನ ಖೇಡಾ ಜಿಲ್ಲೆಯ ಉಂಢೇಲಾ ಗ್ರಾಮದಲ್ಲಿ ಅಕ್ಟೋಬರ್‌ 3 ರ ರಾತ್ರಿ ಮಸೀದಿ ಸಮೀಪದ ಗರ್ಬಾ ನೃತ್ಯ ಸ್ಥಳದ ಮೇಲೆ ಮುಸ್ಲಿಂ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿತ್ತು ಎಂದು ಆರೋಪಿಸಲಾಗಿತ್ತು. ಈ ಘಟನೆಗೆ ಕಾರಣರೆಂದು ಹೇಳಲಾದ ಐದು ಮಂದಿ ಮುಸ್ಲಿಂ ವ್ಯಕ್ತಿಗಳಾದ ಝಹೀರ್‌ ಮಿಯಾ ಮಲಿಕ್, ಮಕ್ಸೂದ್‌ ಬನೂ ಮಲಿಕ್‌, ಸಹದ್ ಮಿಯಾ ಮಲಿಕ್‌, ಶಕೀಲ್‌ ಮಿಯಾ ಮಲಿಕ್‌ ಮತ್ತು ಶಹೀದ್ ರಾಜ್ ಮಲಿಕ್ ರನ್ನು ಮರುದಿನ ಮಾರ್ಗಮಧ್ಯೆ ಎಳೆದು ತಂದು ಕಂಬವೊಂದಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾಗ ನೆರೆದಿದ್ದ ಜನರು ಹರ್ಷೋದ್ಗಾರ ಮಾಡಿದ್ದರು.

ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆಯೂ ಪೊಲೀಸರು ಆ ವ್ಯಕ್ತಿಗಳಿಗೆ ಹೇಳುತ್ತಿರುವುದು ವೀಡಿಯೋದಲ್ಲಿ ಕಾಣಿಸಿತ್ತು.

ಪೊಲೀಸರಿಂದ ಥಳಿತಕ್ಕೊಳಗಾದ ಐವರು ನಂತರ ಗುಜರಾತ್‌ ಹೈಕೋರ್ಟ್‌ ಕದ ತಟ್ಟಿ ತಾವು ಪೊಲೀಸ್‌ ದೌರ್ಜನ್ಯದ ಸಂತ್ರಸ್ತರೆಂದು ಹೇಳಿಕೊಂಡು 15 ಮಂದಿ ಪೊಲೀಸ್‌ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇವರಲ್ಲಿ ಅಹ್ಮದಾಬಾದ್‌ ವಲಯದ ಐಜಿ, ಖೇಡಾ ಎಸ್ಪಿ, ಮಟರ್‌ ಪೊಲೀಸ್‌ ಠಾಣೆಯ 10 ಕಾನ್‌ಸ್ಟೇಬಲ್‌ಗಳು ಹಾಗೂ ಸ್ಥಘಳೀಯ ಕ್ರೈಂ ಬ್ರ್ಯಾಂಚಿನ ಒಬ್ಬ ಇನ್‌ಸ್ಪೆಕ್ಟರ್‌ ಹಾಗೂ ಇಬ್ಬರು ಎಸೈಗಳು ಸೇರಿದ್ದರು.

ರಾಜೇಂದ್ರ ಗಢಿಯಾ ಅವರು ಸಲ್ಲಿಸಿದ್ದ ಅಫಿಡವಿಟ್‌ಗಳ ಹೊರತಾಗಿ ಇಬ್ಬರು ಆರೋಪಿ ಪೊಲೀಸರು ಕೂಡ ಅಫಿಡವಿಟ್‌ ಸಲ್ಲಿಸಿದ್ದರು.

ಸಬ್‌ಇನ್‌ಸ್ಪೆಕ್ಟರ್‌ ಹೇತಲ್‌ಬೆನ್‌ ರಬರಿ ತಮ್ಮ ಅಫಿಡವಿಟ್‌ನಲ್ಲಿ ಘಟನೆಗೆ ಬೇಷರತ್‌ ಕ್ಷಮೆಯಾಚಿಸಿದ್ದರಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಮತೀಯ ಹಿಂಸಾಚಾರ ನಡೆಯದಂತೆ ತಡೆಯಲು ಈ ಕ್ರಮಕೈಗೊಳ್ಳಲಾಗಿತ್ತು ಎಂದಿದ್ದರು.

ಥಳಿತಕ್ಕೊಳಗಾದವರೊಬ್ಬರಿಗೆ 62 ವರ್ಷ ಎಂದು ಹೇಳಿ ಅರ್ಜಿದಾರರು ಅನುಕಂಪ ಗಿಟ್ಟಿಸಲು ಯತ್ನಿಸಿದ್ದರು ಹಾಗೂ ಆತ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದನ್ನು ಬಹಿರಂಗಪಡಿಸಿಲ್ಲ ಎಂದಿದ್ದರು.

ಇನ್ನೊಂದು ಅಫಿಡವಿಟ್‌ನಲ್ಲಿ ಇನ್‌ಸ್ಪೆಕ್ಟರ್‌ ಎ ವಿ ಪರ್ಮಾರ್‌  ನ್ಯಾಯಾಲಯಕ್ಕೆ ಮಾಹಿತಿ ನೀಡಿ ಅರ್ಜಿದಾರರು ಭಯ ಹಾಗೂ ಭೀತಿಯ ವಾತಾವರಣದಲ್ಲಿ ಗ್ರಾಮದಲ್ಲಿ ಸೃಷ್ಟಿಸಲು ಯತ್ನಿಸಿದ್ದರು ಎಂದು ಆರೋಪಿಸಿದ್ದರು.

ಡಿವೈಎಸ್ಪಿ ಒಬ್ಬರು ಈ ಪ್ರಕರಣದಲ್ಲಿ ಸಲ್ಲಿಸಿದ್ದ ಆಂತರಿಕ ವರದಿಯ ಆಧಾರದಲ್ಲಿ ದೈಹಿಕ ಹಲ್ಲೆ ಘಟನೆಯಲ್ಲಿ ಭಾಗಿಯಾಗಿದ್ದಾರೆಂದು ಹೊರನೋಟಕ್ಕೆ ಕಂಡುಬಂದ ಆರು ಆರೋಪಿ ಅಧಿಕಾರಿಗಳ ವಿರುದ್ಧ ಇಲಾಖಾ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು.

Similar News