ಯೋಧನ ಹತ್ಯೆ ಪ್ರತಿಭಟಿಸಿ ಮೊಂಬತ್ತಿ ಮೆರವಣಿಗೆ: ಅಣ್ಣಾಮಲೈ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ
ಚೆನ್ನೈ, ಫೆ. 22: ಡಿಎಂಕೆ(DMK)ಯ ಕೌನ್ಸಿಲರ್ ಯೋಧನನ್ನು ಹತ್ಯೆಗೈದಿರುವುದನ್ನು ಪ್ರತಿಭಟಿಸಿ ಮೊಂಬತ್ತಿ ಮೆರವಣಿಗೆ ನಡೆಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ(Annamalai) ಸೇರಿದಂತೆ ಬಿಜೆಪಿಯ 3,500 ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೂಕ್ತ ಅನುಮತಿ ಇಲ್ಲದೆ ಬಿಜೆಪಿ ನಾಯಕರು ಈ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚೆನ್ನೈ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೃಷ್ಣಗಿರಿಯಲ್ಲಿ ಡಿಎಂಕೆ ವಾರ್ಡ್ ಕೌನ್ಸಿಲರ್ ಯೋಧನನ್ನು ಹತ್ಯೆಗೈದಿರುವುದಾಗಿ ಆರೋಪಿಸಿ ಡಿಎಂಕೆ ಸರಕಾರದ ವಿರುದ್ಧ ಮಂಗಳವಾರ ಪಕ್ಷದ ಕಾರ್ಯಕರ್ತರು ನಡೆಸಿದ ಒಂದು ದಿನದ ಉಪವಾಸ ಮುಷ್ಕರ ಹಾಗೂ ಮೊಂಬತ್ತಿ ಮೆರವಣಿಗೆಯಲ್ಲಿ ಅಣ್ಣಾಮಲೈ ಕೂಡ ಪಾಲ್ಗೊಂಡಿದ್ದರು. ಯೋಧನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಣ್ಣಾಮಲೈ ಅವರು ಮಾಜಿ ಯೋಧರೊಂದಿಗೆ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಆರ್.ಎನ್. ರವಿ(R. N. Ravi) ಅವರನ್ನು ಭೇಟಿಯಾದರು.
‘‘ಮಾಜಿ ಯೋಧರು ತಮ್ಮ ಸಂಕಷ್ಟವನನು ರಾಜ್ಯಪಾಲರಿಗೆ ತಿಳಿಸಿದರು ಹಾಗೂ ತಮಿಳುನಾಡಿನಲ್ಲಿ ತಮಗೆ ಅಸುರಕ್ಷೆ ಕಾಡುತ್ತಿದೆ ಎಂದರು. ರಾಜ್ಯಪಾಲರು ಮಾಜಿ ಯೋಧರ ಸಮಸ್ಯೆಗಳನ್ನು ಆಲಿಸಿದರು ಹಾಗೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು’’ ಎಂದು ಅಣ್ಣಾಮಲೈ ತಿಳಿಸಿದ್ದಾರೆ.