ಇಸ್ರೇಲ್ ದಾಳಿ: 6 ಫೆಲೆಸ್ತೀನೀಯರ ಮೃತ್ಯು

Update: 2023-02-22 17:24 GMT

ಜೆರುಸಲೇಂ, ಫೆ.22: ಆಕ್ರಮಿತ ಪಶ್ಚಿಮದಂಡೆಯ ನಬ್ಲೂಸ್ ನಗರದ ಮೇಲೆ ಬುಧವಾರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 6 ಫೆಲೆಸ್ತೀನೀಯರು ಮೃತಪಟ್ಟಿದ್ದು ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.

‌ನಬ್ಲೂಸ್ ನಗರದ ಮೇಲೆ ಆಕ್ರಮಣಕಾರರು ನಡೆಸಿದ ದಾಳಿಯಲ್ಲಿ 23ರಿಂದ 72 ವರ್ಷದವರೆಗಿನ 6 ಮಂದಿ ಹತರಾಗಿದ್ದು ಸುಮಾರು 50 ಮಂದಿ ಗುಂಡೇಟಿನ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಲಾಖೆ ಹೇಳಿದೆ. ಗುಂಡೇಟಿನಿಂದ ಗಾಯಗೊಂಡ 45 ಮಂದಿಯನ್ನು ಮತ್ತು ಅಶ್ರುವಾಯುವಿನಿಂದ ಅಸ್ವಸ್ಥರಾದ 250 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಫೆಲಸ್ತೀನ್ ರೆಡ್ಕ್ರೆಸೆಂಟ್ ಸೊಸೈಟಿ ಹೇಳಿದೆ.

ನಬ್ಲೂಸ್ ನಗರದಲ್ಲಿ ಸ್ಥಳೀಯ ಭಯೋತ್ಪಾದಕ ಸಂಘಟನೆ ‘ದಿ ಲಯನ್ಸ್ ಡೆನ್’ನ ಸದಸ್ಯರ ವಿರುದ್ಧದ ಕಾರ್ಯಾಚರಣೆಗೆ ಕೆಲವು ಫೆಲೆಸ್ತೀನೀಯರು  ಟಯರ್ಗಳನ್ನು ಸುಟ್ಟು ಅಡ್ಡಿಪಡಿಸಿದರು ಹಾಗೂ ಯೋಧರತ್ತ ಕಲ್ಲೆಸೆದರು. ಅವರನ್ನು ಚದುರಿಸಲು ಅಶ್ರುವಾಯು ಪ್ರಯೋಗ ವಿಫಲವಾದಾಗ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಈ ಮಧ್ಯೆ, ಇಸ್ರೇಲ್-ಫೆಲೆಸ್ತೀನ್ ಸಂಘರ್ಷ ಉಲ್ಬಣಿಸದಂತೆ ತಡೆಯುವುದಕ್ಕೆ ಅಂತರಾಷ್ಟ್ರೀಯ ಸಮುದಾಯ ತುರ್ತು ಆದ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ಶಾಂತಿ ಪ್ರತಿನಿಧಿ ಟೋರ್ ವೆನೆಸ್ಲ್ಯಾಂಡ್ ಹೇಳಿದ್ದಾರೆ.

Similar News