×
Ad

ರಕ್ಬರ್‌ ಖಾನ್‌ ಗುಂಪು ಹತ್ಯೆ ಪ್ರಕರಣದಲ್ಲಿ ರಾಜಸ್ಥಾನ ಸರ್ಕಾರಕ್ಕೆ ಆಸಕ್ತಿ ಇಲ್ಲ: ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್

Update: 2023-02-22 22:49 IST

ಜೈಪುರ್:‌ ರಕ್ಬರ್ ಖಾನ್ ರನ್ನು ಥಳಿಸಿ ಹತ್ಯೆ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದ ಹಿರಿಯ ವಕೀಲರು ರಾಜಸ್ಥಾನ ಸರ್ಕಾರವು ಪ್ರಕರಣದಲ್ಲಿ ಆಸಕ್ತಿ ಹೊಂದಿರಲಿಲ್ಲ ಎಂದು ಆರೋಪಿಸಿದ್ದಾರೆ.

2018ರಲ್ಲಿ ರಾಜಸ್ಥಾನದಲ್ಲಿ ಹಸು ಕಳ್ಳಸಾಗಾಣಿಕೆ ಆರೋಪದ ಮೇಲೆ ಹರ್ಯಾಣದ ನಿವಾಸಿ ಖಾನ್ ಎಂಬವರ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಖಾನ್ ಸಾವನ್ನಪ್ಪಿದ್ದರು.
 

ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿದೆ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮೋಹನ್ ಸಿಂಗ್ ಆ ಸಮಯದಲ್ಲಿ ಒಪ್ಪಿಕೊಂಡಿದ್ದರು. ಅವರನ್ನು ಅಮಾನತು ಮಾಡಿ, ಇತರ ಮೂವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು.

ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನಾಸಿರ್ ಅಲಿ ನಖ್ವಿ  ಅವರು ಅಲ್ವಾರ್ ಪೊಲೀಸ್ ಸೂಪರಿಂಟೆಂಡೆಂಟ್‌ಗೆ ಪತ್ರ ಬರೆದಿದ್ದು, ತಮ್ಮ ಶುಲ್ಕ ಮತ್ತು ಓಡಾಟದ ಬಿಲ್‌ಗಳು ಬಹಳ ಸಮಯದಿಂದ ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ. ಪದೇ ಪದೇ ಮನವಿ ಮಾಡಿದರೂ ಶುಲ್ಕ ಪಾವತಿಸಿಲ್ಲ ಎಂದು ಅವರು ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್‌ನ ವಾದಗಳು ಮುಕ್ತಾಯಗೊಂಡಿವೆ. ಪ್ರಕರಣವು ಈಗ ಕೊನೆಯ ಹಂತದಲ್ಲಿದೆ ಎಂದು ನಖ್ವಿ ಹೇಳಿದರು. ಪ್ರಕರಣ ಮುಗಿದ ಮೇಲೆ ತನ್ನ ಬಾಕಿ ಬಿಲ್‌ಗಳನ್ನು ಪಾವತಿಸದೆ ಅಲ್ವಾರ್‌ಗೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

"ಈ ಪ್ರಕರಣದ ಬಗ್ಗೆ ಸರ್ಕಾರವು ಆಸಕ್ತಿ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ನಾನು ಪ್ರಕರಣದಲ್ಲಿ ಮುಂದುವರಿಯಲು ಸಾಧ್ಯವಿಲ್ಲ." ಎಂದು ಅವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನೊಂದಿಗೆ ಸಂಪರ್ಕದಲ್ಲಿರಲು ಆಡಳಿತವು ಯಾವುದೇ ಜವಾಬ್ದಾರಿಯುತ ಅಧಿಕಾರಿಯನ್ನು ನೇಮಿಸಿಲ್ಲ ಎಂದು ನಖ್ವಿ ತಿಳಿಸಿರುವುದಾಗಿ scroll.in ವರದಿ ಮಾಡಿದೆ.  ಆದಾಗ್ಯೂ, ಅವರು ಪತ್ರವನ್ನು ಕಳುಹಿಸಿದ ನಂತರ ಜಿಲ್ಲಾಡಳಿತವು ಅವರನ್ನು ಸಂಪರ್ಕಿಸಿದ್ದು, ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದೆ.

Similar News