×
Ad

ಅಪರೂಪದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಗುವಿನ ಚಿಕಿತ್ಸೆಗೆ ಅನಾಮಧೇಯ ದಾನಿಯಿಂದ ರೂ. 11 ಕೋಟಿ ದೇಣಿಗೆ!

Update: 2023-02-23 13:22 IST

ಹೊಸದಿಲ್ಲಿ: ಕೇರಳ ಮೂಲದ ದಂಪತಿಗಳಾದ ಸಾರಂಗ್‌ ಮೆನನ್‌ ಮತ್ತು ಅದಿತಿ ಅವರ 15 ತಿಂಗಳು ಪ್ರಾಯದ ಗಂಡು ಮಗು ನಿರ್ವಾಣ್‌, ಸ್ಪೈನಲ್‌ ಮಸ್ಕ್ಯುಲರ್‌ ಎಟ್ರೊಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು  ಜನವರಿ ತಿಂಗಳಲ್ಲಿ ತಿಳಿದು ಬಂದ ನಂತರ ದಂಪತಿ ಕ್ರೌಡ್‌ ಫಂಡಿಂಗ್‌ಗೆ ಮೊರೆ ಹೋಗಿದ್ದರು. ಈ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಗೆ ರೂ. 17.5 ಕೋಟಿ ಮೌಲ್ಯದ ನೊವಾರ್ಟಿಸ್‌ ಕಂಪೆನಿಯ ಸಿಂಗಲ್‌ ಡೋಸ್‌ ಝೊಲ್ಗೆನ್ಸ್ಮಾ ಔಷಧಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕ್ರೌಂಡ್‌ ಫಂಡಿಂಗ್‌ ಮೂಲಕ ಫೆಬ್ರವರಿ 19 ರ ತನಕ ರೂ. 5.5 ಕೋಟಿ ಸಂಗ್ರಹವಾಗಿದ್ದರೆ ಫೆಬ್ರವರಿ 20 ರಂದು ಈ ಮೊತ್ತದಲ್ಲಿ ರೂ. 11 ಕೋಟಿಯಷ್ಟು ಏರಿಕೆಯಾಗಿತ್ತು. ಕ್ರೌಡ್‌ ಫಂಡಿಂಗ್‌ ಸಂಸ್ಥೆಗಳಾದ ಮಿಲಾಪ್‌ ಮತ್ತು ಇಂಪ್ಯಾಕ್ಟ್‌ ಗುರು ಬಳಿ ಮೆನನ್‌ ಪರಿಶೀಲಿಸಿದಾಗ ರೂ. 11 ಕೋಟಿ ದೇಣಿಗೆ ನೀಡಿದ ದಾನಿ ಅನಾಮಧೇಯವಾಗಿ ಉಳಿಯಲು ಬಯಸಿದ್ದಾಗಿ ತಿಳಿದು ಬಂತು.

ಸಾರಂಗ್‌ ಮೆನನ್‌ ಮರ್ಚಂಟ್‌ ನೇವಿ ಅಧಿಕಾರಿಯಾಗಿದ್ದರೆ, ಅದಿತಿ ಅವರು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದಾರೆ. ಸದ್ಯ ದಂಪತಿ ಅದಿತಿ ಅವರ ಎರ್ಣಾಕುಳಂ ನಿವಾಸದಲ್ಲಿದ್ದಾರೆ. ರೂ. 11 ಕೋಟಿ ದೇಣಿಗೆ ನೀಡಿದ ದಾನಿ ತಮ್ಮ ಪಾಲಿಗೆ ದೇವರಂತೆ ಎಂದು ದಂಪತಿ ಹೇಳಿದ್ದಾರೆ.

ಈಗ ಮಗುವಿಗೆ ಅಗತ್ಯವಿರುವ ಔಷಧಿ ಆಮದು ಮಾಡಲು ಸಾರಂಗ್‌ ಅವರು ಮುಂಬೈ ಹಿಂದುಜಾ ಆಸ್ಪತ್ರೆ ಜೊತೆ ಸಂಪರ್ಕದಲ್ಲಿದ್ದಾರೆ. ಈ ಔಷಧಿಯ ಕಸ್ಟಮ್ಸ್‌ ಸುಂಕ ಮತ್ತು ಜಿಎಸ್‌ಟಿ ವಿನಾಯಿತಿಗಾಗಿ ಕೇರಳ ಸಂಸದ ಹಿಬಿ ಈಡನ್‌ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನೂ ಸಂಪರ್ಕಿಸಲಾಗಿದೆ.

ದಂಪತಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರನ್ನೂ ಸಂಪರ್ಕಿಸಿದ್ದು ರಾಜ್ಯ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: BSNL ನಿಂದ ರಿಲಯನ್ಸ್ ಜಿಯೋಗೆ ಸಿಮ್  ಪೋರ್ಟ್ ಮಾಡಲು ಕರ್ನಾಟಕ ರಾಜ್ಯ ಪೊಲೀಸರ ನಿರ್ಧಾರ

Similar News