ದಿಲ್ಲಿ:ವಿಮಾನದಿಂದ ಪವನ್ ಖೇರಾರನ್ನು ಕೆಳಗಿಳಿಸಿ ಬಂಧಿಸಿದ ಅಸ್ಸಾಂ ಪೊಲೀಸರು

Update: 2023-02-23 09:03 GMT

ಹೊಸದಿಲ್ಲಿ: ಎಐಸಿಸಿ ಸಭೆಯಲ್ಲಿ  ಭಾಗವಹಿಸಲು  ಗುರುವಾರ ಬೆಳಗ್ಗೆ ದಿಲ್ಲಿಯಿಂದ  ಛತ್ತೀಸ್ ಗಢದ ರಾಜಧಾನಿ ರಾಯ್‌ಪುರಕ್ಕೆ ತೆರಳುವ ಸಿದ್ದತೆಯಲ್ಲಿದ್ದ ಕಾಂಗ್ರೆಸ್‌ನ ನಾಯಕ ಪವನ್ ಖೇರಾ ಅವರನ್ನುವಿಮಾನದಿಂದ ಕೆಳಗಿಳಿಸಿರುವ ಅಸ್ಸಾಂ ಪೊಲೀಸ್ ತಂಡ ಅವರನ್ನು ಬಂಧಿಸಿದೆ ಎಂದು NDTV ವರದಿ ಮಾಡಿದೆ.

ಎಫ್‌ಐಆರ್ ಅಥವಾ ಪ್ರಥಮ ಮಾಹಿತಿ ವರದಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಸ್ಸಾಂ ಪೊಲೀಸರು ಪವನ್ ಖೇರಾ ಅವರನ್ನು ಬಂಧಿಸಿದ್ದಾರೆ.

ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಿದಾಗ ವಿಮಾನದಲ್ಲಿದ್ದ ನೂರಾರು ಕಾಂಗ್ರೆಸ್ ನಾಯಕರು ದಿಲ್ಲಿ  ವಿಮಾನ ನಿಲ್ದಾಣದಲ್ಲಿ  ಪ್ರತಿಭಟಿಸಿದರು, ಘೋಷಣೆಗಳನ್ನು ಕೂಗಿದರು ಹಾಗೂ  ವಿಮಾನದ ಪಕ್ಕದಲ್ಲಿಯೇ ಧರಣಿ ನಡೆಸಿದರು.

ಕಾಂಗ್ರೆಸ್ ನ ಹಿರಿಯ ವಕ್ತಾರರಾಗಿರುವ ಖೇರಾ,  ಬೋರ್ಡಿಂಗ್ ಪಾಸ್ ಹೊಂದಿದ್ದರೂ ವಿಮಾನ ಹತ್ತಿದ ಕೆಲವೇ ಕ್ಷಣಗಳ ನಂತರ ಕೆಳಗಿಳಿಸಲಾಯಿತು. ರಾಯ್ಪುರಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರು ತಕ್ಷಣವೇ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಖೇರಾ ಅವರನ್ನು ಬಂಧಿಸುವಂತೆ ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ಮುಖಂಡರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ

" ದಿಲ್ಲಿ ವಿಮಾನ ನಿಲ್ದಾಣದಲ್ಲಿ ರಾಯ್‌ಪುರಕ್ಕೆ ಹೋಗುವ ಫ್ಲೈಟ್ 6E 204 ನಿಂದ  ಒಬ್ಬ ಪ್ರಯಾಣಿಕನನ್ನು ಪೊಲೀಸರು ಕೆಳಗಿಳಿಸಿದ್ದಾರೆ. ಇತರ ಕೆಲವು ಪ್ರಯಾಣಿಕರು ಕೂಡ ತಮ್ಮ ಇಚ್ಛೆಯ ಮೇರೆಗೆ ಇಳಿಯಲು ನಿರ್ಧರಿಸಿದ್ದಾರೆ. ನಾವು ಸಂಬಂಧಪಟ್ಟ ಅಧಿಕಾರಿಗಳ ಸಲಹೆಯನ್ನು ಅನುಸರಿಸುತ್ತಿದ್ದೇವೆ. ವಿಮಾನವು ಸದ್ಯಕ್ಕೆ ವಿಳಂಬವಾಗಿದೆ ಹಾಗೂ  ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ’’ ಎಂದು ಇಂಡಿಗೊ ಏರ್ ಲೈನ್ ಹೇಳಿದೆ.

Similar News