×
Ad

ಹಿಂಡನ್ಬರ್ಗ್ ಹೊಡೆತ: ವಿಶ್ವದ 25 ಅತ್ಯಂತ ಶ್ರೀಮಂತರ ಗುಂಪಿನಿಂದಲೂ ಹೊರಬಿದ್ದ ಗೌತಮ್ ಅದಾನಿ

Update: 2023-02-23 15:52 IST

ಹೊಸದಿಲ್ಲಿ, ಫೆ.23: ಕೃತಕವಾಗಿ ಶೇರುಗಳ ಬೆಲೆಗಳ ಏರಿಕೆ ಮತ್ತು ಲೆಕ್ಕಪತ್ರ ವಂಚನೆಯನ್ನು ಆರೋಪಿಸಿದ್ದ ಹಿಂಡನ್ಬಗ್ ರೀಸರ್ಚ್ನ ವರದಿಯ ಹೊಡೆತದಿಂದಾಗಿ ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ ಅದಾನಿಯವರ ಸಂಪತ್ತು ದಿನೇದಿನೇ ಕರಗುತ್ತಲೇ ಇದೆ. ಬುಧವಾರ ಅವರ ನಿವ್ವಳ ಸಂಪತ್ತು 43.4 ಶತಕೋಟಿ ಡಾ.ಗೂ ಕೆಳಕ್ಕೆ ಕುಸಿದಿದ್ದು,ಅವರೀಗ ವಿಶ್ವದ 25 ಅತ್ಯಂತ ಶ್ರೀಮಂತರ ಗುಂಪಿನಿಂದಲೂ ಹೊರಬಿದ್ದಿದ್ದಾರೆ.

ಇತ್ತೀಚಿನವರೆಗೂ ಏಶ್ಯದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಮೂರನೇ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಅದಾನಿ ಫೋರ್ಬ್ಸ್ ಇಂಡೆಕ್ಸ್ನ ಪ್ರಕಾರ ಈಗ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 26ನೇ ಸ್ಥಾನಕ್ಕೆ ಜಾರಿದ್ದಾರೆ. ಬುಧವಾರ ಅದಾನಿ ಗ್ರೂಪ್ನ ಶೇರುಗಳು ಭರಾಟೆಯಿಂದ ಮಾರಾಟವಾಗಿದ್ದು,ಒಂದೇ ದಿನದಲ್ಲಿ ಅದಾನಿಯವರ ವೈಯಕ್ತಿಕ ನಿವ್ವಳ ಸಂಪತ್ತು 3.6 ಶತಕೋಟಿ ಡಾ.ಗಳಷ್ಟು ಕರಗಿದೆ. ನೈಕ್ನ ಫಿಲ್ ನೈಟ್ ಮತ್ತು ಕುಟುಂಬ 46.3 ಶತಕೋಟಿ ಡಾ.ನಿವ್ವಳ ಸಂಪತ್ತಿನೊಂದಿಗೆ ಫೋರ್ಬ್ಸ್ನ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 25ನೇ ಸ್ಥಾನಕ್ಕೆ ಏರುವ ಮೂಲಕ ಅದಾನಿಯನ್ನು 26ನೇ ಸ್ಥಾನಕ್ಕೆ ತಳ್ಳಿದೆ. ಬ್ಲೂಮ್ಬರ್ಗ್ ಇಂಡೆಕ್ಸ್ನಲ್ಲಿ ಅದಾನಿ ಇಟಲಿಯ ಗಿಯೋವನ್ನಿ ಫೆರೆರೋ ಮತ್ತು ಕುಟುಂಬ (42.9 ಶತಕೋಟಿ ಡಾ.) ಮತ್ತು ಫ್ರಾನ್ಸ್ನ ಫ್ರಾಂಕೋಯಿಸ್ ಪಿನಾಲ್ಟ್ (41.2 ಶತಕೋಟಿ ಡಾ.) ನಡುವಿನ ಸ್ಥಾನದಲ್ಲಿದ್ದಾರೆ. ಗುರುವಾರವೂ ಗ್ರೂಪ್ನ ಶೇರುಗಳಲ್ಲಿ ಕುಸಿತ ಮುಂದುವರಿದಿದ್ದು, ಮಧ್ಯಾಹ್ನದ ವೇಳೆಗೆ ಅದಾನಿ ಪೋರ್ಟ್ಸ್ ಮತ್ತು ಅಂಬುಜಾ ಸಿಮೆಂಟ್ ಹೊರತುಪಡಿಸಿ ಇತರ ಕಂಪನಿಗಳ ಶೇರುಗಳು ನಷ್ಟದಲ್ಲಿದ್ದವು.

ಪ್ರಸ್ತುತ ವರ್ಷದ ಆರಂಭದಲ್ಲಿ 121 ಶತಕೋಟಿ ಡಾ.ನಿವ್ವಳ ಸಂಪತ್ತಿನೊಂದಿಗೆ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿಯ ಸ್ಥಾನದಲ್ಲಿದ್ದ ಅದಾನಿ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. 2023ನೇ ಸಾಲಿಗೆ ಫೋರ್ಬ್ಸ್ ರಿಯಲ್ ಟೈಮ್ ಬಿಲಿಯಾಧೀಶರ ಪಟ್ಟಿಯಂತೆ ಫೆ.1ರಂದು ಅದಾನಿಯವರ ನಿವ್ವಳ ಸಂಪತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ ಅಂಬಾನಿಯವರ ನಿವ್ವಳ ಸಂಪತ್ತಿಗಿಂತ ಕೆಳಕ್ಕೆ ಕುಸಿಯುವುದರೊಂದಿಗೆ 10ನೇ ಸ್ಥಾನಕ್ಕೆ ಕುಸಿದಿದ್ದರು ಮತ್ತು ವಿಶ್ವದ ಅತ್ಯಂತ ಶ್ರೀಮಂತ ಭಾರತೀಯ ಎಂಬ ಹೆಗ್ಗಳಿಕೆ ಅಂಬಾನಿ ಮುಡಿಗೇರಿತ್ತು.

ಫೆ.3ರಂದು ಅದಾನಿಯವರ ನಿವ್ವಳ ಸಂಪತ್ತು ಇನ್ನಷ್ಟು ಕುಸಿದು 58 ಶತಕೋಟಿ ಡಾ.ಗೆ ತಲುಪುವುದರೊಂದಿಗೆ ವಿಶ್ವದ 20 ಅತ್ಯಂತ ಶ್ರೀಮಂತರ ಗುಂಪಿನಿಂದ ಹೊರಬಿದ್ದಿದ್ದರು. ಈ ವಾರದಲ್ಲಿ ಇನ್ನೊಂದು ಸುತ್ತಿನ ಮಾರುಕಟ್ಟೆ ಏರಿಳಿತವು ಅದಾನಿಯವರನ್ನು ಫೋರ್ಬ್ಸ್ ಮತ್ತು ಬ್ಲೂಮ್ಬರ್ಗ್ ರಿಯಲ್ ಟೈಮ್ ಬಿಲಿಯಾಧೀಶರ ಪಟ್ಟಿಗಳಲ್ಲಿ 25 ನೇ ಸ್ಥಾನಕ್ಕೆ ಇಳಿಸಿತ್ತು.

ಅದಾನಿ ಫೆಬ್ರವರಿ 2022ರಿಂದಲೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯ ಸ್ಥಾನದಲ್ಲಿದ್ದರು. ಬ್ಲೂಮ್ಬರ್ಗ್ ಬಿಲಿಯಾಧೀಶರ ಇಂಡೆಕ್ಸ್ನಂತೆ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ನಿವ್ವಳ ಸಂಪತ್ತಿನಲ್ಲಿ 42.7 ಶತಕೋಟಿ ಡಾ.ಗಳಷ್ಟು ಏರಿಕೆಯಾಗಿತ್ತು ಮತ್ತು ಅದು ವಿಶ್ವದಲ್ಲಿ ಐದನೇ ಅತ್ಯಂತ ದೊಡ್ಡ ಸಂಪತ್ತಿನ ಏರಿಕೆಯಾಗಿತ್ತು. 2022 ಸೆಪ್ಟಂಬರ್ನಲ್ಲಿ 156.3 ಶತಕೋಟಿ ಡಾ.ನಿವ್ವಳ ಸಂಪತ್ತಿನೊಂದಿಗೆ ಅದಾನಿ ಕೆಲ ಸಮಯ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೂ ಏರಿದ್ದರು.

ಈ ವಾರದ ಆರಂಭದಲ್ಲಿ ಅದಾನಿ ಗ್ರೂಪ್ನ 10 ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು 100 ಶತಕೋಟಿ ಡಾ.ಗೂ ಕೆಳಕ್ಕೆ ಕುಸಿದಿತ್ತು.

Similar News