×
Ad

ಶ್ರೀಲಂಕಾದ ಗಾಳಿ ವಿದ್ಯುತ್ ಸ್ಥಾವರಗಳಲ್ಲಿ ಅದಾನಿ ಗುಂಪಿನಿಂದ 3,650 ಕೋಟಿ ರೂ. ಹೂಡಿಕೆ

Update: 2023-02-23 21:49 IST

ಕೊಲಂಬೊ, ಫೆ. 23: ತಾನು ದಿವಾಳಿಯಾಗಿದ್ದೇನೆ ಎಂದು ಘೋಷಿಸಿದ ಬಳಿಕ, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ ಗುರುವಾರ ತಾನು ಸ್ವೀಕರಿಸಿರುವ ಮೊದಲ ವಿದೇಶಿ ಹೂಡಿಕೆಯ ಬಗ್ಗೆ ಘೋಷಣೆ ಮಾಡಿದೆ. ಅದಾನಿ ಗುಂಪು(Adani Group) 442 ಮಿಲಿಯ ಡಾಲರ್ (ಸುಮಾರು 3,650 ಕೋಟಿ ರೂಪಾಯಿ) ವೆಚ್ಚದಲ್ಲಿ ದೇಶದಲ್ಲಿ ಗಾಳಿ ವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಅದು ತಿಳಿಸಿದೆ.

ಕೈಗಾರಿಕೋದ್ಯಮಿ ಗೌತಮ್ ಅದಾನಿ(Gautham Adani) ಒಡೆತನದ ಕಂಪೆನಿ ಅದಾನಿ ಗ್ರೀನ್ ಎನರ್ಜಿಯು ಶ್ರೀಲಂಕಾ ದ್ವೀಪದ ಉತ್ತರದಲ್ಲಿ ಎರಡು ಗಾಳಿ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಿದೆ ಎಂದು ಶ್ರೀಲಂಕಾದ ಹೂಡಿಕೆ ಮಂಡಳಿ ತಿಳಿಸಿದೆ.

ಈ ಎರಡು ಸ್ಥಾವರಗಳ ಒಟ್ಟು ಹೂಡಿಕೆ 442 ಮಿಲಿಯ ಡಾಲರ್ ಆಗಿರುತ್ತದೆ ಹಾಗೂ ಈ ಸ್ಥಾವರಗಳು 2025ರ ವೇಳೆಗೆ ರಾಷ್ಟ್ರೀಯ ಜಾಲಕ್ಕೆ ವಿದ್ಯುತ್ ಪೂರೈಸಲಿವೆ ಎಂದು ಹೇಳಿಕೆಯೊಂದರಲ್ಲಿ ಹೂಡಿಕೆ ಮಂಡಳಿ ತಿಳಿಸಿದೆ.

2021ರಲ್ಲಿ, ಕೊಲಂಬೊದಲ್ಲಿ 700 ಮಿಲಿಯ ಡಾಲರ್ (ಸುಮಾರು 5,785 ಕೋಟಿ ರೂಪಾಯಿ) ವೆಚ್ಚದ ಆಯಕಟ್ಟಿನ ಬಂದರು ಟರ್ಮಿನಲ್ ನಿರ್ಮಾಣ ಯೋಜನೆಯನ್ನು ಶ್ರೀಲಂಕಾ ಸರಕಾರ ಅದಾನಿ ಗುಂಪಿಗೆ ನೀಡಿತ್ತು. ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಭಾರತದ ಕಳವಳವನ್ನು ತಣಿಸುವ ಕ್ರಮ ಎಂಬಂತೆ ಆ ಯೋಜನೆಯನ್ನು ಅದಾನಿಗೆ ನೀಡಲಾಗಿತ್ತು. ಯೋಜನೆಯ ಗುತ್ತಿಗೆದಾರನಾಗಿ ಭಾರತ ಸರಕಾರವು ಅದಾನಿ ಗುಂಪನ್ನು ಶಿಫಾರಸು ಮಾಡಿತ್ತು.

ಗಾಳಿ ವಿದ್ಯುತ್ ಯೋಜನೆಯನ್ನು ಅಂತಿಮಗೊಳಿಸುವುದಕ್ಕಾಗಿ ತಾನು ಬುಧವಾರ ಅದಾನಿ ಗುಂಪಿನ ಅಧಿಕಾರಿಗಳನ್ನು ಭೇಟಿಯಾದೆ ಎಂದು ಇಂಧನ ಸಚಿವ ಕಾಂಚನ ವಿಜೆಸೇಕರ ಹೇಳಿದರು.

ಅದಾನಿ ಗುಂಪಿನ ಕಂಪೆನಿಗಳು ಶೇರು ಮಾರುಕಟ್ಟೆಯಲ್ಲಿ ಭಾರೀ ಅವ್ಯವಹಾರಗಳಲ್ಲಿ ತೊಡಗಿವೆ ಎಂಬುದಾಗಿ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ವರದಿಯು ಒಂದು ತಿಂಗಳ ಹಿಂದೆ ಆರೋಪಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಆ ವರದಿಯ ಬಳಿಕ, ಅದಾನಿ ಗುಂಪಿನಿ ಕಂಪೆನಿಗಳ ಮಾರುಕಟ್ಟೆ ಮೌಲ್ಯವು 120 ಬಿಲಿಯ ಡಾಲರ್ (ಸುಮಾರು 9.92 ಲಕ್ಷ ಕೋಟಿ ರೂಪಾಯಿ)ನಷ್ಟು ಕುಸಿದಿದೆ.

Similar News